ಬೆಂಗಳೂರಿನ ಅಪಾರ್ಟ್ ಮೆಂಟ್ ವೊಂದರಲ್ಲಿ ಅಗ್ನಿ ದುರಂತ ಸಂಭವಿಸಿದ್ದು ಇಬ್ಬರು ಸಜೀವ ದಹನವಾಗಿದ್ದಾರೆ. ಬೆಂಕಿ ದುರಂತದಲ್ಲಿ ಲಕ್ಷ್ಮೀದೇವಿ ಮತ್ತು ಪುತ್ರಿ ಭಾಗ್ಯರೇಖಾ ಸುಟ್ಟುಕರಕಲಾಗಿದ್ದಾರೆ. ಘಟನೆಯಲ್ಲಿ ಆರು ಮಂದಿಗೆ ಗಾಯಗಳಾಗಿದ್ದು ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಗಳು ತಿಳಿಸಿವೆ.
ಬೆಂಕಿ ದುರಂತಕ್ಕೆ ಖಚಿತ ಕಾರಣ ತಿಳಿದುಬಂದಿಲ್ಲ. ಆದರೆ ಅಪಾರ್ಟ್ ಮೆಂಟ್ ನಲ್ಲಿ ಅಳವಡಿಸಿದ್ದ ಗ್ಯಾಸ್ ಪೈಪ್ ಲೈನ್ ಸ್ಪೋಟಗೊಂಡು ಅಗ್ನಿ ಅವಘಡ ಸಂಭವಿಸಿದೆ. ಅಪರಾಹ್ನ 4.15ಕ್ಕೆ ಮೂರನೇ ಮಹಡಿಯ 210ನೇ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಬಿಟಿಎಂ ಲೇಔಟ್ ಮೂರನೇ ಹಂತದ ದೇವರಚಿಕ್ಕನಹಳ್ಳಿಯ ಆಶ್ರಿತ್ ಅಪಾರ್ಟ್ ಮೆಂಟ್ ನ 210ನೇ ನಂಬರಿನ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮನೆಯಲ್ಲಿ ಗ್ರಿಲ್ ಅಳವಡಿಸಿದ್ದರಿಂದ ಇಬ್ಬರು ಮಹಿಳೆರನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಬೆಂಕಿ ಆ ಮಹಿಳೆಯರ ನೈಟಿಗೂ ಹೊತ್ತಿಕೊಂಡ ಮೇಲೆ ಅಗ್ನಿಶಾಮಕ ದಳ ವಾಹನ ಸ್ಥಳಕ್ಕೆ ಬಂದಿತು ಎಂದು ತಿಳಿಸಿದ್ದಾರೆ.
ಬೆಂಕಿಯ ಕೆನ್ನಾಲಿಗೆ ನಾಲ್ಕು ಅಂತಸ್ತಿಗೂ ಹಬ್ಬಿದ್ದು, ಒಬ್ಬರನ್ನು ರಕ್ಷಿಸಲಾಗಿದೆ. ಉಳಿದವರನ್ನು ಬೆಂಕಿಯಿಂದ ರಕ್ಷಿಸುವ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಾರ್ಟ್ ಮೆಂಟ್ ನಲ್ಲಿ ಬೆಂಕಿ ಕೆನ್ನಾಲಿಗೆ ಹಬ್ಬಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲ ಮನೆಯವರನ್ನು ಖಾಲಿ ಮಾಡಿಸಲಾಗಿದೆ. ಬೆಂಕಿಯ ದುರಂತದಲ್ಲಿ ಮೂರು ಮನೆಗಳು ಸಂಪೂರ್ಣ ಸುಟ್ಟುಭಸ್ಮವಾಗಿವೆ. ಆಶ್ರಿತ ಶೆಲ್ಟರ್ಸ್ ಪ್ರೈ.ಲಿಮಿಟೆಡ್ ಒಡೆತನದ ಈ ಅಪಾರ್ಟ್ ಮೆಂಟ್ ನಲ್ಲಿ ಒಟ್ಟು 72 ಪ್ಲಾಟ್ ಗಳಿವೆ.
ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮುಂದುವರಿಸಿದ್ದಾರೆ. ಮೃತದೇಹಗಳನ್ನು ಹೊರತೆಗೆಯುವ ಕೆಲಸ ನಡೆಯುತ್ತಿದೆ. ಬೆಂಕಿ ವ್ಯಾಪಕವಾಗಿ ಹಬ್ಬಿರುವುದರಿಂದ ದಟ್ಟವಾದ ಹೊಗೆ ಸುತ್ತಲೂ ಆವರಿಸಿದೆ.
(ಮತ್ತಷ್ಟು ಮಾಹಿತಿ ದೊರೆತ ನಂತರ ಸುದ್ದಿ ಅಪ್ ಡೇಟ್ ಮಾಡಲಾಗುವುದು)


