ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಒಕ್ಕೂಟ ಸರ್ಕಾರ ರೈತರ ಬಗ್ಗೆ ಅಸಡ್ಡೆ ತೋರುತ್ತಿದೆ ಎಂದು ಶಿರೋಮಣಿ ಆಕಾಲಿ ದಳದ ನಾಯಕಿ ಮತ್ತು ಮಾಜಿ ಸಚಿವ ಹರಸಿಮ್ರಾತ್ ಬಾದಲ್ ಆರೋಪಿಸಿದರು.
ದೆಹಲಿಯ ಗುರುದ್ವಾರ ರಾಕಬ್ ಗಂಜ್ ಬಳಿ ಸಮಾವೇಶಗೊಂಡ ನೂರಾರು ಮಂದಿ ಅಕಾಲಿ ದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ರಸ್ತೆತಡೆ ಮಾಡಿದರು. ಕೇಂದ್ರ ಸರ್ಕಾರ ರೈತ ವಿರೋಧಿ ಧೋರಣೆಯನ್ನು ಖಂಡಿಸಿದರು. ಮೋದಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಪ್ರತಿಭಟನಾನಿರತ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಹಲವು ಮಂದಿ ರೈತರು ಮೃತಪಟ್ಟಿದ್ದಾರೆ. ದೆಹಲಿಯ ಮೂರು ಗಡಿಗಳಲ್ಲಿ ರೈತರು ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಅವರ ಸಮಸ್ಯೆಗಳನ್ನು ಕೇಳುವ ಗೋಜಿಗೆ ಹೋಗದ ಸರ್ಕಾರ ಅಸಡ್ಡೆ ತೋರುತ್ತಿದೆ ಎಂದು ಟೀಕಿಸಿದರು.

ರೈತ ವಿರೋಧಿಯಾಗಿರುವ ಕೃಷಿ ಕಾಯ್ದೆಗಳು ರದ್ದುಗೊಳ್ಳುವವರೆಗೂ ನಾವು ಹೋರಾಟವನ್ನು ಮುಂದುವರಿಸುತ್ತೇವೆ. ರೈತ ವಿರೋಧಿ ಕಾನೂನುಗಳನ್ನು ಹೇರಲು ಬಿಡುವುದಿಲ್ಲ. ಶಿರೋಮಣಿ ಅಕಾಲಿ ದಳ ಪ್ರತಿಭಟನಾನಿರತ ರೈತರ ಭಾಗವಾಗಿರುವುದು ಹೆಮ್ಮೆ ಅನಿಸುತ್ತದೆ ಎಂದು ಹೇಳಿದರು.
ಕರಾಳ ಕಾಯ್ದೆಗಳ ವಿರುದ್ಧ ದನಿ ಎತ್ತುವುದನ್ನು ನಿಲ್ಲಿಸುವುದಿಲ್ಲ. ಯಾವಾಗ ಸರ್ವಾಧಿಕಾರ ಸತ್ಯವಾಗುತ್ತದೋ ಆಗ ಹೋರಾಟ ಕರ್ತವ್ಯವಾಗುತ್ತದೆ. ಕೇಂದ್ರ ಸರ್ಕಾರ ರೈತರ ಬಗ್ಗೆ ಧಾರ್ಷ್ಟ್ಯದಿಂದ ನಡೆದುಕೊಳ್ಳುತ್ತಿದೆ. ಇಂತಹ ಧೋರಣೆಯನ್ನು ನಿಲ್ಲಿಸದಿದ್ದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಕಾಲಿ ದಳದ ನೂರಾರು ಕಾರ್ಯಕರ್ತರು ಸಂಸತ್ ಭವನದ ಕಡೆಗೆ ಮೆರವಣಿಗೆ ಹೊರಡುತ್ತಿದ್ದಂತೆ ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖಬೀರ್ ಸಿಂಗ್, ಹರಸಿಮ್ರಾತ್ ಬಾದಲ್ ಸೇರಿದಂತೆ ಹಲವು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸುಖಬೀರ್ ಸಿಂಗ್, ನಾವು ಪ್ರಧಾನಿಗೆ ವಿಷಯ ತಿಳಿಸಲು ಸಂಸತ್ ಭವನದ ಕಡೆಗೆ ಹೋಗುತ್ತಿದ್ದವು. ಆಗ ಪೊಲೀಸರು ಕಾರ್ಯಕರ್ತರ ಮೇಲೆ ಲಾಠಿ ಬೀಸಿದರು. ವಾಹನಗಳ ಮೇಲೆ ದಾಳಿ ನಡೆಸಿದರು. ಶಾಂತಿಯುತ ಪ್ರತಿಭಟನೆಯನ್ನು ತಡೆದರು ಎಂದು ಆರೋಪಿಸಿದರು.


