ಕೊವಿಡ್-19ರಿಂದ ಜೀವನ ನಿರ್ವಹಣೆಗೂ ತೊಂದರೆಯಾಗಿರುವ ರಾಜ್ಯದ 55 ಲಕ್ಷ ಬಡ ಕುಟುಂಬಗಳಿಗೆ ತಲಾ 25 ಸಾವಿರ ರೂಪಾಯಿ ನೆರವು ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ಆಗ್ರಹಿಸಿದರು.
ಕೊರೊನದಿಂದ ನೊಂದವರು, ಸಾಮಾನ್ಯರು ಮತ್ತು ಜೀವನ ನಿರ್ವಹಣೆಗೆ ಸಂಕಷ್ಟ ಎದುರಿಸುತ್ತಿರುವವರನ್ನು ಗುರುತಿಸಿ ರಾಜ್ಯ ಸರ್ಕಾರ ವಿಶೇಷ ಹಣಕಾಸು ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಲೆವ್ವಿ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯಿಂದ ಹಣವನ್ನು ಸಂಗ್ರಹಿಸಿ ಜನರ ಸಂರಕ್ಷಣೆಗೆ ಮುಂದಾಗಬೇಕು. ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು. ಬೆಲೆ ಏರಿಕೆ ನಿರಂತರ ಪ್ರಕ್ರಿಯೆ. ಅದು ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಬೆಲೆ ಏರಿಕೆ ಕಡಿಮೆಯಾಗುವುದಿಲ್ಲ. ಇದು ಸಾಮಾನ್ಯ ಎಂದು ಹೇಳಿದರು.
ಕೊವಿಡ್ ಮತ್ತು ಬೆಲೆ ಏರಿಕೆಯಿಂದ ಜನಸಾಮಾನ್ಯರು, ಬಡವರು ಮತ್ತು ರೈತರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಒಬ್ಬರ ಮೇಲೆ ಒಬ್ಬರು ಆರೋಪ ಮಾಡಿಕೊಳ್ಳುವುದು ಬಿಟ್ಟು ನಾವು ಜನರಿಗೆ ಏನು ಮಾಡಬಹುದು, ಪರಿಹಾರ ಕ್ರಮಗಳೇನು ಎಂಬ ಬಗ್ಗೆ ಚರ್ಚಿಸಿದರೆ ಒಳ್ಳೆಯದು. ಜನರ ಸಂರಕ್ಷಣೆ ಮುಖ್ಯ ಎಂದರು.
ಸೆಸ್ ಮೊದಲಾದ ತೆರಿಗೆಗಳ ಮೂಲಕ ಆದಾಯ ಸಂಗ್ರಹಿಸಿ ತೊಂದರೆಯಲ್ಲಿರುವ ರೈತರು, ಜನರನ್ನು ರಕ್ಷಿಸಬೇಕು. ಹಾಗಾಗಿ ಅವರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಜೊತೆಗೆ ಲಕ್ಷಾಂತರ ಉದ್ಯೋಗಗಳನ್ನು ನೀಡುವ ಸಣ್ಣ ಕೈಗಾರಿಕೆಗಳಿಗೂ ನೆರವು ನೀಡಬೇಕು ಎಂದು ಸಲಹೆ ಮಾಡಿದರು.


