ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಮಾನವೀಯ ಗುಣವುಳ್ಳ ವ್ಯಕ್ತಿಯಾಗಿದ್ದರಲ್ಲದೆ ಎಲ್ಲರಿಗೂ ಸಹಕಾರ ನೀಡುವ ಮನೋಭಾವ ಹೊಂದಿದ್ದರು ಎಂದು ಕಾಂಗ್ರೆಸ್ ನಾಯಕಿ ಮಾರ್ಗರೇಟ್ ಆಳ್ವಾ ತಿಳಿಸಿದರು.
ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ಸೇಂಟ್ ಪ್ಯಾಟ್ರಿಕ್ ಚರ್ಚ್ ನಲ್ಲಿ ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಅವರ ಅಂತ್ಯಕ್ರಿಯೆ ಪೂರ್ವ ಕಾರ್ಯಕ್ರಮದಲ್ಲಿ ಮಾತನಾಡಿದ ಮಾರ್ಗರೇಟ್ ಆಳ್ವಾ, ಇಂದಿರಾ ಗಾಂಧಿ ಕಾಲದಿಂದಲೂ ಫರ್ನಾಂಡಿಸ್ ಕಾಂಗ್ರೆಸ್ ಗೆ ನಿಷ್ಟರಾಗಿ ಬಂದಿದ್ದಾರೆ. ಅವರು ಕಾರ್ಯಕರ್ತರನ್ನು ಅತಿಯಾಗಿ ಪ್ರೀತಿಸುತ್ತಿದ್ದರು ಎಂದು ಹೇಳಿದರು.
ನಾನು ಮತ್ತು ಆಸ್ಕರ್ ಫರ್ನಾಂಡಿಸ್ 80ರ ದಶಕದಲ್ಲಿ ರಾಜಕೀಯ ಪ್ರವೇಶ ಮಾಡಿದೆವು. ಒಳ್ಳೆಯ ಸ್ನೇಹಿರತರಾಗಿದ್ದರು. ಒಟ್ಟಿಗೆ ಕೆಲಸ ಮಾಡಿದ್ದೇವೆ. ಇಂದಿರಾ ಗಾಂಧಿ ನಿಧನಾ ನಂತರ ರಾಜೀವ್ ಗಾಂಧಿ ಜೊತೆ ಕೆಲಸ ಮಾಡಿದರು. ನಂತರ ಸೋನಿಯಾ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಕೇಂದ್ರ ಸಚಿವರಾಗಿಯೂ ಉತ್ತಮ ಕೆಲಸ ಮಾಡಿದರು ಎಂದು ಬಣ್ಣಿಸಿದರು.

ಇಂದು ಆಸ್ಕರ್ ನಮ್ಮೊಂದಿಗೆ ಇಲ್ಲ. ಇದು ಪಕ್ಷ ಮತ್ತು ಕುಟುಂಬದವರಿಗೆ ಸಾಕಷ್ಟು ನಷ್ಟವನ್ನು ಉಂಟು ಮಾಡಿದೆ. ನೋವು ತಂದಿದೆ. ಪತ್ನಿ ಬ್ಲಾಸೆಮ್ ಮತ್ತು ಕುಟುಂಬದ ಸದಸ್ಯರಿಗೆ ಆಗಿರುವ ನೋವಿನಲ್ಲಿ ನಾವೂ ಭಾಗಿಯಾಗುತ್ತೇವೆ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ಫಾದರ್ ಪ್ರಾರ್ಥನೆ ಮಾಡಿದರು. ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ಪೂರೈಸಿದರು. ಈ ಸಂದರ್ಭದಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕದ ಕಾಂಗ್ರೆಸ್ಪ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಇದ್ದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಆಸ್ಕರ್ ಪತ್ನಿ ಬ್ಲಾಸಂ ಫರ್ನಾಂಡೀಸ್, ಪುತ್ರ ಓಶಾನ್ ಫರ್ನಾಂಡೀಸ್, ಪುತ್ರಿ ಓಶೀನ್ ಫರ್ನಾಂಡೀಸ್, ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ, ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಹಾಜರಿದ್ದರು.

ಇದಕ್ಕೂ ಮೊದಲು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡೀಸ್ ಅವರ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜು ಸಮೀಪದ ರೆಸ್ಟ್ ಹೌಸ್ ರಸ್ತೆಯ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.


