Friday, October 18, 2024
Google search engine
Homeಮುಖಪುಟಕ್ಷೇತ್ರ ಪುನರ್ ವಿಂಗಡಣೆಗೆ ಆಯೋಗ ರಚನೆ ಸೂಕ್ತವಲ್ಲ-ಪ್ರತಿಪಕ್ಷಗಳ ವಿರೋಧ

ಕ್ಷೇತ್ರ ಪುನರ್ ವಿಂಗಡಣೆಗೆ ಆಯೋಗ ರಚನೆ ಸೂಕ್ತವಲ್ಲ-ಪ್ರತಿಪಕ್ಷಗಳ ವಿರೋಧ

ಸಚಿವ ಈಶ್ವರಪ್ಪ ಅವರು ಮಂಡಿಸಿದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ ತಿದ್ದುಪಡಿ ಮಸೂದೆಗೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದವು. ಮಸೂದೆ ಮೇಲೆ ಮಾತನಾಡಿದ ಸದಸ್ಯರು “ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗಳನ್ನು ಮುಂದೂಡುವ ಉದ್ದೇಶದಿಂದಲೇ ಈ ಮಸೂದೆಯನ್ನು ತರಲಾಗುತ್ತಿದೆ ಎಂದು ಆರೋಪಿಸಿದರು.

ವಿಧಾನಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಸದಸ್ಯ ಪ್ರಿಯಾಂಕ ಖರ್ಗೆ, ಕ್ಷೇತ್ರ ಪುನರ್ ವಿಂಗಡಣೆ, ಮೀಸಲಾತಿ ನಿಗದಿಯಲ್ಲಿ ಲೋಪಗಳಿದ್ದರೆ ಸರಿಪಡಿಸಬೇಕು. ಆದರೆ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂಬ ನೆಪವೊಡ್ಡಿ ಕ್ಷೇತ್ರ ಪುನರ್ ವಿಂಗಡಣೆಗೆ ಆಯೋಗ ರಚನೆಗೆ ನೀವು ನೀಡುತ್ತಿರುವ ಸಮಯ, ಕಾರಣ ಸೂಕ್ತವಾಗಿಲ್ಲ ಎಂದು ಟೀಕಿಸಿದರು.

ಕ್ಷೇತ್ರ ಪುನರ್ ವಿಂಗಡಣೆ, ಮತ್ತು ಮೀಸಲಾತಿ ಪ್ರಕಟಣೆಯಲ್ಲಿ ದೋಷವಿದೆ ಎಂದು ನ್ಯಾಯಾಲಯ ಹೇಳಿದೆಯೇ? ಚುನಾವಣಾ ಆಯೋಗ ನಾವು ಚುನಾವಣೆ ನಡೆಸಲು ಅಮರ್ಥರು ಎಂದು ಹೇಳಿದೆಯೇ? ಯಾರೋ ಹೇಳಿದ್ದನ್ನು ಒಪ್ಪಿಕೊಳ್ಳುವುದಾದರೆ ನ್ಯಾಯಾಲಯ ಮತ್ತು ಚುನಾಯಿತಿ ಪ್ರತಿನಿಧಿಗಳು ಏಕೆ ಬೇಕು ಎಂದು ಪ್ರಶ್ನಿಸಿದರು.

ಸದಸ್ಯ ರಾಜುಗೌಡ ಮಾತನಾಡಿ, ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ಮಸೂದೆಯನ್ನು ವಿರೋಧಿಸುತ್ತೇನೆ. ಕ್ಷೇತ್ರಪುನರ್ ವಿಂಗಡಣೆಗೆ ಆಯೋಗ ರಚಿಸುತ್ತಿರುವ ಬಿಜೆಪಿಯ ಉದ್ದೇಶದ ಹಿಂದೆ ಹಿಡೆನ್ ಅಜೆಂಡಾ ಇದೆ. ಮೀಸಲಾತಿ ಪ್ರಕ್ರಿಯೆ ಮುಗಿದೆ. ಆದರೂ ಪಂಚಾಯತಿ ಚುನಾವಣೆಗಳನ್ನು ಮುಂದೂಡುವ ದುರುದ್ದೇಶದಿಂದ ಮಸೂದೆ ತಂದಿರುವುದು ಸರಿಯಲ್ಲ ಎಂದು ಆರೋಪಿಸಿದರು.

ಜೆಡಿಎಸ್ ಸದಸ್ಯ ಶಿವಲಿಂಗೇಗೌಡ ಮಸೂದೆಯ ಮೇಲೆ ಮಾತನಾಡಿ ತಿದ್ದುಪಡಿಯಲ್ಲಿ ಹಲವು ಅನುಮಾನಗಳು ಇವೆ. ಆಯೋಗ ರಚನೆ ರಾಜಕೀಯ ದುರುದ್ದೇಶಕ್ಕೆ ಬಳಸುವುದಾದರೆ ಅದು ಬೇಡವೇ ಬೇಡ. ಆಯೋಗವನ್ನು ಸರ್ಕಾರವೇ ರಚಿಸುತ್ತದೆ. ಅಧಿಕಾರಿಗಳು ನೇಮಕ ಮಾಡುತ್ತದೆ. ಸರ್ಕಾರ ಹೇಳಿದಂತೆ ಆಯೋಗದ ಅಧಿಕಾರಿಗಳು ಕೇಳುತ್ತಾರೆ. ಇದರಿಂದ ರಾಜಕೀಯ ಮೇಲಾಟ ಹೆಚ್ಚುತ್ತದೆ ಎಂದು ಹೇಳಿದರು.

ಸದಸ್ಯ ಕೃಷ್ಣಬೈರೇಗೌಡ ಮಾತನಾಡಿ ಈ ತಿದ್ದುಪಡಿ ಸಂವಿಧಾನ ವಿರೋಧಿ. ಕ್ಷೇತ್ರ ಪುನರ್ ವಿಂಗಡಣೆ ಆಯೋಗ ರಚನೆ ಮಾಡುತ್ತಿರುವುದು ಸೂಕ್ತವಲ್ಲ. ನಿಮ್ಮ ಸಂಪುಟ ನಿಯಮ ರೂಪಿಸಿದ ಮೇಲೆ ಅದರಂತೆ ಕ್ಷೇತ್ರ ಪುನರ್ ವಿಂಗಡಣೆ ಮಾಡಲಾಯಿತು. ಈಗಾ ಅವರನ್ನೇಕೆ ದೂರುತ್ತೀರ. 2016ರ ಕಾನೂನಿನಲ್ಲಿ ಕ್ಷೇತ್ರ ಹೇಗಿರಬೇಕೆಂಬ ನಿಯಮಗಳು ಇವೆ. ಇದಕ್ಕೆ ಸಂಬಂಧಪಟ್ಟಂತೆ ಅಧಿಸೂಚನೆಯೂ ಹೊರಬಿದ್ದಿದೆ ಎಂದು ಹೇಳಿದರು.

ಅಧಿಕಾರ ವಿಕೇಂದ್ರಿಕರಣಕ್ಕೆ ನೀವು ವಿರುದ್ದವಾಗಿದ್ದೀರಿ. ನಿಮಗೆ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯ್ತಿ ಮತ್ತು ಬಿಬಿಎಂಪಿ ಬೇಡ. ಕೇವಲ ಶಾಸಕರು ಇರಬೇಕೆಂಬುದು ಸರ್ಕಾರದ ಉದ್ದೇಶ. ಇದೇ ಕಾರಣಕ್ಕೆ ಆಯೋಗ ರಚನೆ ಮಾಡುತ್ತಿದ್ದೀರಿ ಮತ್ತು ಚುನಾವಣೆ ಮುಂದೂಡುವ ತಂತ್ರವೇ ಆಗಿದೆ. ಈಗಾಗಲೇ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರ ಪೂರ್ಣಗೊಂಡು ಆರು ತಿಂಗಳು ಆಗಿದೆ. ನಿಯಮದಂತೆ ಮೊದಲೇ ಚುನಾವಣೆ ನಡೆಯಬೇಕು. ಆದರೆ ಸಂವಿಧಾನದ ನಿಯಮಗಳನ್ನು ಉಲ್ಲಂಘಿಸಿದೆ. ಹೀಗಾಗಿ ಮಸೂದೆಯನ್ನು ವಾಪಸ್ ಪಡೆಯಿರಿ ಎಂದು ಒತ್ತಾಯಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular