Friday, January 3, 2025
Google search engine
Homeಮುಖಪುಟಅರಸು ನಿಗಮದ ಭದ್ರಬುನಾದಿ ನಾಶ-ಶಿವಲಿಂಗೇಗೌಡ

ಅರಸು ನಿಗಮದ ಭದ್ರಬುನಾದಿ ನಾಶ-ಶಿವಲಿಂಗೇಗೌಡ

ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಸ್ಥಾಪಿಸಿದ ದಿ. ದೇವರಾಜ ಅರಸು ಅಭಿವೃದ್ಧಿ ನಿಗಮವನ್ನು ರಾಜಕೀಯ ದಾಳವನ್ನಾಗಿ ಮಾಡಿ ನಿಗಮದ ಭದ್ರಬುನಾದಿಯನ್ನು ನಾಶ ಮಾಡಲಾಗಿದೆ ಎಂದು ಜೆಡಿಎಸ್ ಸದಸ್ಯ ಶಿವಲಿಂಗೇಗೌಡ ಆರೋಪಿಸಿದರು.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡ ಅವರು, ಅರಸು ನಿಗಮಕ್ಕೆ ಅನುದಾನ ನೀಡುತ್ತಿಲ್ಲ. ಕೇವಲ ಪ್ರಧಾನ ಕಾರ್ಯದರ್ಶಿ, ಅಧ್ಯಕ್ಷರನ್ನು ನೇಮಕ ಮಾಡಿ ಅವರಿಗೆ ಗೂಟದ ಕಾರು ನೀಡುತ್ತಿದ್ದು ಇಡೀ ಹಣ ಪೂರ್ತಿ ವೇತನ, ಸಾರಿಗೆಗೆ ನೀಡಲಾಗುತ್ತಿದೆ. ಇದರಿಂದ ಫಲಾನುಭವಿಗಳಿಗೆ ಪ್ರಯೋಜನವಾಗುತ್ತಿಲ್ಲ ಎಂದು ಟೀಕಿಸಿದರು.

ದಿ.ದೇವರಾಜ ಅರಸು ಅಭಿವೃದ್ಧಿ ನಿಗಮ ಇದ್ದಾಗ ಎಲ್ಲಾ ಫಲಾನುಭವಿಗಳಿಗೂ ಸಾಲ ಸೌಲಭ್ಯ ದೊರೆಯುತ್ತಿತ್ತು. ಆದರೆ ಇಂದು ಜಾತಿಗೊಂದು ನಿಗಮ ಮಾಡಿ ತಪ್ಪು ಮಾಡಿದ್ದೇವೆ. ಅರ್ಹರಿಗೆ ಆರ್ಥಿಕ ನೆರವು ಸಿಗುತ್ತಿಲ್ಲ. ಹಿಂದುಳಿದ ವರ್ಗದವರಿಗೆ ಚೈತನ್ಯ ನೀಡುತ್ತಿಲ್ಲ. ಜನರಿಗೆ ಸೌಲಭ್ಯ ದೊರೆಯದ ಇಂತಹ ನಿಗಮಗಳನ್ನು ಮುಚ್ಚಿದರೆ ಒಳ್ಳೆಯದು ಎಂದು ಹೇಳಿದರು.

ಜೆಡಿಎಸ್ ಸದಸ್ಯ ಅನ್ನದಾನಿ ಅವರೂ ಇದಕ್ಕೆ ದನಿಗೂಡಿಸಿದರು. 2019ರಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವಧಿಯಲ್ಲಿ ದೇವರಾಜ ಅರಸು ಅಭಿವೃದ್ಧಿ ನಿಗಮಕ್ಕೆ 250 ಕೋಟಿ ಅನುದಾನ ನೀಡಿದ್ದರು. ನಂತರ ನಿಗಮಕ್ಕೆ ಅನುದಾನ ದೊರೆತಿಲ್ಲ. ಫಲಾನುಭವಿಗಳಿಗೆ ಸಾಲವನ್ನೂ ಕೊಟ್ಟಿಲ್ಲ. ಈ ಮೂಲಕ ಅರಸು ಅವರಿಗೆ ಅವಮಾನ ಮಾಡಲಾಗುತ್ತಿದೆ ಎಂದು ಆಪಾದಿಸಿದರು.

ಕಾಂಗ್ರೆಸ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಪ್ರಶ್ನೋತ್ತರದಲ್ಲಿ ಭಾಗವಹಿಸಿ 2020-21ನೇ ಸಾಲಿನಲ್ಲಿ ಫಲಾನುಭವಿಗಳ ಆಯ್ಕೆ ಮಾಡಿಲ್ಲ. ಸಾಲ ಸೌಲಭ್ಯ ನೀಡಿಲ್ಲ. ಹಾಗಾಗಿ ಎರಡು ಸಾಲಿನ ಅನುದಾನವನ್ನು ಒಮ್ಮೆಲೇ ಬಿಡುಗಡೆ ಮಾಡಿ ಫಲಾನುಭವಿಗಳಿಗೆ ಸಾಲ ನೀಡುವಂತೆ ಒತ್ತಾಯಿಸಿದರು.

ಸದಸ್ಯ ಕೃಷ್ಣಾರೆಡ್ಡಿ ಮಾತನಾಡಿ “ಕೋವಿಡ್-19ರ ಕಾರಣ ನೀಡಿ ಅನುದಾನ ಬಿಡುಗಡೆ ಮಾಡಿಲ್ಲ. ಆದರೆ ಸರ್ಕಾರ ಅನುದಾನ ಕೊಟ್ಟಿದೆ ಎಂದು ಹೇಳುತ್ತಿದೆ ಎಂದು ಸಚಿವರಿಂದ ಸಮಜಾಯಿಸಿ ಬಯಸಿದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ ಉತ್ತರಿಸಿ ಕೊವಿಡ್ ಕಾರಣದಿಂದ ಸಾಲ ಸೌಲಭ್ಯ ನೀಡಲು ಆಗಿಲ್ಲ ಎಂದು ಒಪ್ಪಿಕೊಂಡರು.

ಕೃಷ್ಣಾರೆಡ್ಡಿ ಮಾತನಾಡಿ, ಇದೊಂದು ಒಳ್ಳೆಯ ಯೋಜನೆ. ಪ್ರತಿ ವರ್ಷ ದಿ.ದೇವರಾಜ ಅರಸು ಅಭಿವೃದ್ಧಿ ನಿಗಮಕ್ಕೆ ಸಾಲಕ್ಕಾಗಿ 500 ಅರ್ಜಿಗಳು ಬರುತ್ತವೆ. ಇದರಲ್ಲಿ ಕೇವಲ 5-6 ಮಂದಿಗೆ ಮಾತ್ರ ಸಾಲ ದೊರೆಯುತ್ತದೆ. ಆದ್ದರಿಂದ ಫಲಾನುಭವಿಗಳ ಸಂಖ್ಯೆಯನ್ನು ಸರ್ಕಾರ ಹೆಚ್ಚಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಕೆಲ ಸದಸ್ಯರೂ ದನಿಗೂಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular