ಭಾರತ ಕಮ್ಯುನಿಸ್ಟ್ ಪಕ್ಷದ ನಾಯಕ ಹಾಗೂ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ಕನ್ಹಯ್ಯ ಕುಮಾರ್ ಕಾಂಗ್ರೆಸ್ ಸೇರ್ಪಡೆ ಆಗಬಹುದು ಎಂದು ಹೇಳಲಾಗುತ್ತಿದೆ.
ಸಿಪಿಐ ಪಕ್ಷದಲ್ಲಿ ಕನ್ಹಯ್ಯ ಕುಮಾರ್ ಅವರಿಗೆ ಆದ್ಯತೆ ನೀಡದೆ ಇರುವುದರಿಂದ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ ಶಾಸಕ ಜಿಗ್ನೇಶ್ ಮೇವಾನಿ ಕೂಡ ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎಂಬುದನ್ನು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಕಳೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ವಡಗಾವ್ ಕ್ಷೇತ್ರದಿಂದ ಜಿಗ್ನೇಶ್ ಮೇವಾನಿ ಸ್ಪರ್ಧಿಸಿದ್ದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೆ ಮೇವಾನಿ ಅವರಿಗೆ ಬೆಂಬಲ ನೀಡಿತ್ತು.
ಕನ್ಹಯ್ಯ ಕುಮಾರ್ ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ ಕುರಿತು ಪ್ರತಿಕ್ರಿಯಿಸಿರುವ ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜ, ಇದು ವದಂತಿ. ಕನ್ಹಯ್ಯ ನಮ್ಮ ಪಕ್ಷದಲ್ಲೇ ಇದ್ದಾರೆ. ಇದೇ ತಿಂಗಳ ಅಂತ್ಯದಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಇದೆ. ಅದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಬಿಹಾರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಕನ್ನಯ್ಯ ಕುಮಾರ್ ಕಾಂಗ್ರೆಸ್ ಸೇರ್ಪಡೆಯಾದರೆ ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕಳೆದ ಬಾರಿ ಕಾಂಗ್ರೆಸ್ ಬಿಹಾರದಲ್ಲಿ ಆರ್.ಜೆ.ಡಿ ಮತ್ತು ಸಿಪಿಎಂಎಲ್ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿತ್ತು. ಹಾಗಾಗಿ ಕಾಂಗ್ರೆಸ್ ಗೆ 19 ಸ್ಥಾನಗಳು ಲಭಿಸಿದ್ದವು. ಆರ್.ಜೆ.ಡಿ 144 ಮತ್ತು ಸಿಪಿಐಎಂಎಲ್ 12 ಸ್ಥಾನಗಳು ಪಡೆದಿದ್ದವು.
ಇತ್ತೀಚೆಗೆ ಹಲವು ಯುವಮುಖಂಡರು ಕಾಂಗ್ರೆಸ್ ತೊರೆದಿರುವುದು ಪಕ್ಷಕ್ಕೆ ಹಿನ್ನಡೆಯಾಗಿದೆ. ಜ್ಯೋತಿರಾದಿತ್ಯ ಸಿಂಧ್ಯಾ, ಸುಸ್ಮಿತಾ ದೇವ್, ಜಿತಿನ್ ಪ್ರಸಾದ್, ಪ್ರಿಯಾಂಕ ಚತುರ್ವೇದಿ ಕಾಂಗ್ರೆಸ್ ತೊರೆದು ಬಿಜೆಪಿ ಮತ್ತು ಟಿಎಂಸಿ ಸೇರಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಯುವ ನಾಯಕರ ಕೊರತೆ ಎದುರಾಗಿದೆ. ಯುವ ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಕಾಂಗ್ರೆಸ್ ಸಿದ್ದತೆ ನಡೆಸಿದೆ. ಈಗ ಕನ್ಹಯ್ಯ ಕುಮಾರ್ ಅವರು ರಾಹುಲ್ ಭೇಟಿ ಆಗಿರುವುದು ಕುತೂಹಲ ಮೂಡಿಸಿದೆ.


