ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆ ಏರಿಕೆಗೆ ಕಾರಣವಾಗಿರುವ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಿಮಿನಲ್ ಲೂಟಿ ಮಾಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಆರೋಪಿಸಿದರು.
ಬೆಲೆ ಏರಿಕೆ ವಿಷಯದ ಕುರಿತು ನಿಯಮ 60ರಡಿ ಪ್ರಸ್ತಾಪ ಮಾಡಿದ ಸಿದ್ದರಾಮಯ್ಯ “ಪ್ರಧಾನಿ ಇಂದಿರಾಗಾಂಧಿ ಕಾಲದಲ್ಲಿ ಪೆಟ್ರೊಲ್ ಬೆಲೆ ಕೇವಲ 7 ಪೈಸೆ ಏರಿಕೆಯಾಗಿದ್ದನ್ನು ಖಂಡಿಸಿ ಜನಸಂಘದ ಅಟಲ್ ಬಿಹಾರಿ ವಾಜಪೇಯಿ ಅವರು ಅಂದು ಆಡಿದ್ದ ಕ್ರಿಮಿನಲ್ ಲೂಟ್ ಪದವನ್ನೇ ಬಳಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಸವರಾಜ ಬೊಮ್ಮಾಯಿ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡರು.
ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ 125 ಡಾಲರ್ ಇತ್ತು. ಆದರೂ 2012ರಲ್ಲಿ ಡಿಸೆಲ್ ಬೆಲೆ 40.91 ರೂ, ಪೆಟ್ರೋಲ್ ಬೆಲೆ 74 ರೂಪಾಯಿ ಇತ್ತು. ಅಬಕಾರಿ ಸುಂಕ ಡಿಸೆಲ್ ಗೆ 3 ರೂ, ಪೆಟ್ರೋಲ್ ಗೆ 9.21 ರೂಗಳನ್ನು ವಿಧಿಸಲಾಗಿತ್ತು.
2014ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗ ಕಚ್ಚಾತೈಲ ಬೆಲೆ ಬ್ಯಾರಲ್ ಗೆ 105 ಡಾಲರ್ ಗೆ ಇಳಿಯಿತು. ಆದರೂ ಡಿಸೆಲ್ ಬೆಲೆ 55.48 ರೂ. ಪೆಟ್ರೋಲ್ ಬೆಲೆ 80.11 ರೂಗೆ ಏರಿಕೆ ಮಾಡಿದರು. 2015ರಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್ ಗೆ 84.16 ಡಾಲರ್ ಇತ್ತು. ಅದು 2015-2016ರಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್ ಗೆ 46.17 ಡಾಲರ್ ಗೆ ಇಳಿಕೆಯಾಯಿತು.
2021 ಜನವರಿಗೆ ಕಚ್ಚಾತೈಲ ಬೆಲೆ 54.77ಕ್ಕೆ ಏರಿಕೆಯಾಯಿತು. ಸೆಪ್ಟೆಂಬರ್ ತಿಂಗಳಲ್ಲಿ ಅದು 61 ಡಾಲರ್ ಗೆ ಏರಿಕೆ ಆಗಿದೆ. 2014 ರಿಂದ 2021 ಸೆಪ್ಟೆಂಬರ್ ಅವಧಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಡಿಸೆಲ್ ಗೆ 9ಪಟ್ಟು ಅಬಕಾರಿ ಸುಂಕ ವಿಧಿಸಿದೆ. ಪೆಟ್ರೊಲ್ ಗೆ ಮೂರುಪಟ್ಟು ಅಬಕಾರಿ ಸುಂಕ ಹಾಕಿದೆ.
ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಸಾಕಷ್ಟು ಪ್ರಮಾಣದಲ್ಲಿ ಇಳಿಕೆಯಾದರೂ ಅಬಕಾರಿ ಸುಂಕ ಇಳಿಸಲಿಲ್ಲ. ಪೆಟ್ರೊಲ್, ಡಿಸೆಲ್ ಮತ್ತು ಗ್ಯಾಸ್ ಬೆಲೆಯನ್ನು ಇಳಿಕೆ ಮಾಡಿ ಕೇಂದ್ರ ಸರ್ಕಾರ ಗ್ರಾಹಕರಿಗೆ ಅದರ ಲಾಭಾಂಶವನ್ನು ವರ್ಗಾಯಿಸಲೇ ಇಲ್ಲ ಎಂದು ಸಿದ್ದರಾಮಯ್ಯ ದೂರಿದರು.
ಬಾಂಡ್ ಖರೀದಿ ಆರಂಭಿಸಿದ್ದು ಅಟಲ್ ಬಿಹಾರಿ ವಾಜಪೇಯಿ ಸರ್ಕಾರ. ಅದನ್ನು ಡಾ.ಮನಮೋಹನ್ ಸಿಂಗ್ ಸರ್ಕಾರ ಮುಂದುವರಿಸಿತು. 2006-10ರವರೆಗೆ ಮನಮೋಹನ್ ಸಿಂಗ್ ಸರ್ಕಾರ ಆಯಿಲ್ ಬಾಂಡ್ ಖರೀದಿ ಮಾಡಿದೆ. ಇದಕ್ಕಾಗಿ ಪ್ತತಿ ವರ್ಷ 9989.96 ಕೋಟಿ ರೂಪಾಯಿ ಬಡ್ಡಿ ಕೊಡಬೇಕು. ಒಟ್ಟು ಆಯಿಲ್ ಬಾಂಡ್ ಖರೀದಿಯ ಮೌಲ್ಯ 1,30,923 ಕೋಟಿ ಎಂದು ವಿವರಿಸಿದರು.
ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಸಾಕಷ್ಟು ಲಾಭ ಮಾಡಿಕೊಂಡರೂ ಕೇವಲ 70 ಸಾವಿರ ರೂಪಾಯಿ ಬಡ್ಡಿ ಕೊಟ್ಟಿದೆ. ಬಾಂಡ್ ಗಳು ಒಂದೇ ಬಾರಿಗೆ ಮೆಚುರಿಟಿಗೆ ಬರುವುದಿಲ್ಲ. ಮೂರು ವರ್ಷಕ್ಕೊಮ್ಮೆ ಮೆಚುರಿಟಿಗೆ ಬರುತ್ತದೆ. ಹಾಗಾಗಿ ಕೇಂದ್ರ ಸರ್ಕಾರ ಜನರಿಂದ ಲೂಟಿ ಮಾಡುತ್ತಿದೆ ಎಂದು ಅರೋಪಿಸಿದರು.
ಸಿದ್ದರಾಮಯ್ಯ ಡಿಸೆಲ್ ಮತ್ತು ಪೆಟ್ರೋಲ್ ಬೆಲೆಯ ಅಂಕಿಅಂಶ ನೀಡುತ್ತ ಹೋಗುತ್ತಿರುವ ಮಧ್ಯೆಯೇ ಕೆರಳಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, “ನೀವು ಕೇಂದ್ರ ಸರ್ಕಾರದ ಅಂಕಿಅಂಶಗಳನ್ನೇ ಪ್ರಸ್ತಾಪಿಸುತ್ತಿದ್ದೀರಿ. ಅದಕ್ಕೂ ಇಲ್ಲಿ ಬೆಲೆ ಏರಿಕೆಗೂ ಏನು ಸಂಬಂಧ. ರಾಜ್ಯದ ವಿಷಯಗಳನ್ನು ಮಾತ್ರ ಪ್ರಸ್ತಾಪಿಸಿ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಯಿಂದ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಗದ್ದಲ ನಡೆಯಿತು. ಸೋಷಿಯಲ್ ಮೀಡಿಯಾದಲ್ಲಿ ಬೆಲೆ ಏರಿಕೆಗೆ ಕಾಂಗ್ರೆಸ್ ಕಾರಣ ಎಂದು ಚರ್ಚೆಯಾಗುತ್ತಿದೆ. ಈಗ ನೋಡಿದರೆ ಚರ್ಚೆಗೆ ಅವಕಾಶ ನೀಡುತ್ತಿಲ್ಲ. ಸತ್ಯಾಂಶ ಹೇಳಲು ಬಿಡುತ್ತಿಲ್ಲ ಎಂದು ಕಾಂಗ್ರೆಸ್ ಸದಸ್ಯರು ಟೀಕಿಸಿದರು.
ಗಲಾಟೆ ನಿಂತ ನಂತರ ಮತ್ತೆ ಮಾತು ಆರಂಭಿಸಿದ ಸಿದ್ದರಾಮಯ್ಯ, ರಾಜ್ಯಸಭಾ ಸದಸ್ಯ ಸುಬ್ರಮಣ್ಯಸ್ವಾಮಿ ಅವರ ಟ್ವೀಟ್ ಉಲ್ಲೇಖಿಸಿ “ಸೀತೆಯ ನೇಪಾಳದಲ್ಲಿ, ರಾವಣನ ಶ್ರೀಲಂಕಾದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆ ಇದೆ. ರಾಮನ ದೇಶದಲ್ಲಿ ಬೆಲೆ ಗಗನಕ್ಕೇರಿದೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ತಿವಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಸುಬ್ರಹ್ಮಣ್ಯಸ್ವಾಮಿ ನನಗೂ ಚೆನ್ನಾಗಿ ಗೊತ್ತು. ಅವರೊಬ್ಬ ಪ್ರೀಲ್ಯಾನ್ಸ್ ರಾಜಕಾರಣಿ. ಯಾವುದೇ ಪಕ್ಷದಲ್ಲಿದ್ದರೂ ಟೀಕೆ ಮಾಡುತ್ತಾರೆ ಎಂದರು. ಇದಕ್ಕೆ ಸಿದ್ದರಾಮಯ್ಯ ನೋ ಅಬ್ಜಕ್ಷನ್ ಅಂದು ನಕ್ಕು ಸುಮ್ಮನಾದರು.
ಕೇಂದ್ರದ ಅಂಕಿಅಂಶಗಳನ್ನು ಪ್ರಸ್ತಾಪಿಸಬಾರದು ಎಂಬ ಜೆ.ಸಿ.ಮಾಧುಸ್ವಾಮಿ ಸೇರಿದಂತೆ ಆಡಳಿತ ಪಕ್ಷದ ಸದಸ್ಯರ ಮಾತಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರ ಸರ್ಕಾರವನ್ನು ಟೀಕಿಸಿದ ಮಾತುಗಳನ್ನು ಪ್ರಸ್ತಾಪಿಸಿ ಬಿಜೆಪಿಗೆ ತಿರುಗೇಟು ನೀಡಿದರು.


