ಈವರೆಗೆ ಬಸ್ ಗಳಲ್ಲಿ ಮಾತ್ರ ಪಿಕ್ ಪಾಕೇಟ್ ಮಾಡುತ್ತಿದ್ದುದನ್ನು ಕೇಳಿದ್ದೆವು. ಈಗ ವರಸೆ ಬದಲಿಸಿರುವ ಕಳ್ಳರು ಆಟೋಗಳಲ್ಲೂ ಜೇಬು ಕಳ್ಳತನ ಇಳಿದಿರುವುದು ಪ್ರಯಾಣಿಕರು ಮತ್ತು ಚಾಲಕರ ಆತಂಕಕ್ಕೆ ಕಾರಣವಾಗಿದೆ. ಮೊದಲೇ ಆಟೋದಲ್ಲಿ ಕುಳಿತಿರುವ ಪ್ರಯಾಣಿಕ ಧರಿಸಿರುವ ಬಟ್ಟೆ, ಹಿಡಿದಿರುವ ಕ್ಯಾಷ್ ಬ್ಯಾಗ್, ನೌಕರರೇ, ಅವರ ಬಳಿ ಹಣ ಇರಬಹುದೇ ಎಂಬುದನ್ನು ಗಮಿಸಿ ಆ “ಮೂವರು” ಅದೇ ಆಟೋಕ್ಕೆ ಹತ್ತಿ ಪ್ರಯಾಣಿಕನಿಂದ ಹಣ ಪೀಕಿ ಪರಾರಿಯಾಗುತ್ತಿರುವ ಪ್ರಕರಣಗಳು ತುಮಕೂರು ನಗರದಲ್ಲಿ ಹೆಚ್ಚುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬರುತ್ತಿವೆ. ಆದರೆ ಇದುವರೆಗೂ ಒಂದೇ ಒಂದು ಪ್ರಕರಣವೂ ಠಾಣೆಯಲ್ಲಿ ದಾಖಲಾಗಿಲ್ಲ.
ಹೌದು! ಇದು ಸತ್ಯ. ಇದುವರೆಗೂ ನಾಲ್ಕೈದು ಪಿಕ್ ಪಾಕೇಟ್ ಘಟನೆಗಳು ನಡೆದಿವೆ ಎಂಬುದು ಹೆಸರು ಹೇಳಲು ಇಚ್ಚಿಸದ ಆಟೋ ಚಾಲಕರೊಬ್ಬರ ಆತಂಕದ ಮಾತು. ಜೊತೆಗೆ ಪಿಕ್ ಪಾಕೇಟ್ ಗೆ ಒಳಗಾಗಿ ಹಣ ಕಳೆದುಕೊಂಡವರು ತಮ್ಮ ಆಪ್ತರ ಬಳಿ ನೋವು ತೋಡಿಕೊಳ್ಳುತ್ತಿರುವ ಪರಿ. ಯಾಕೆ ದೂರು ನೀಡಲಿಲ್ಲ ಎಂಬುದಕ್ಕೆ ‘ಕೆಲಸ ಬಿಟ್ಟು’ ಹೋಗಲು ಆಗುವುದಿಲ್ಲ ಎಂಬ ಉತ್ತರ.
ತುಮಕೂರಿನ ಟೌನ್ ಹಾಲ್ ನಿಂದ ಕ್ಯಾತ್ಸಂದ್ರದ ಕಡೆಗೆ ಹೋಗುವ ಆಟೋಗಳಲ್ಲಿ ಇಂತಹ ಪಿಕ್ ಪಾಕೇಟ್ ನಡೆಯುತ್ತದೆ ಎಂಬುದು ಹಣ ಕಳೆದುಕೊಂಡವರ ದೂರು. ಆಟೋದಲ್ಲಿ ಮೊದಲು ಒಬ್ಬರು ಕುಳಿತುಕೊಳ್ಳುವವರೆಗೂ ನೋಡಿ ಆನಂತರ ಆ “ಮೂವರು” ಒಬ್ಬರಾದ ಮೇಲೆ ಒಬ್ಬಂತೆ ಆ ಆಟೋ ಹತ್ತಿಕೊಳ್ಳುತ್ತಾರಂತೆ. ನಾಲ್ವರು ಆಟೋದಲ್ಲಿ ಕುಳಿತುಕೊಳ್ಳಲು ಕಷ್ಟ ಅಲ್ಲವೇ? ಅದಕ್ಕೆ ಒಬ್ಬರನ್ನು ತೊಡೆಯ ಮೇಲೆ ಕುಳ್ಳರಿಸಿಕೊಳ್ಳುತ್ತಾರಂತೆ!
ಆಟೋ ಸ್ವಲ್ಪ ದೂರು ಚಲಿಸುತ್ತಿದ್ದಂತೆ ಆ “ಮೂವರು” ತಮ್ಮ ಕೈಚಳಕ ಶುರುವಿಟ್ಟುಕೊಳ್ಳುತ್ತಾರಂತೆ! ತೊಡೆಯ ಮೇಲೆ ಕುಳಿತುಕೊಂಡವನು ಹಿಂದಿನಿಂದ ಮೊದಲು ಹತ್ತಿದ ಪ್ರಯಾಣಿಕನ ಬೆನ್ನಿಗೆ ‘ಚಾಕು” ಇಡುತ್ತಾನೆ. ಜೇಬಿಗೆ ಕತ್ತರಿಯೂ ಬೀಳುತ್ತೆ! ಇನ್ನೊಬ್ಬ ಪ್ರಯಾಣಿಕನ ಜೇಬಿನಲ್ಲಿನ ಮೊಬೈಲ್ ಕದಿಯುತ್ತಾನೆ. ಪ್ರಯಾಣಿಕನಿಗೆ ಕಿವಿಯಲ್ಲಿ ಪಿಸುಮಾತಿನಲ್ಲಿ ಎಚ್ಚರಿಸುತ್ತಲೇ ಇರುವ ಆ ಮೂವರು’ ಪಿಕ್ ಪಾಕೇಟರ್ಸ್ ಭದ್ರಮ್ಮ ವೃತ್ತದ ಎಡಭಾಗದಲ್ಲಿರುವ ಪೆಟ್ರೋಲ್ ಬಂಕ್ ಹತ್ತಿರ ಇಳಿದು ಆಟೋ ಚಾಲಕನಿಗೆ ಹಣಕೊಟ್ಟು ಇಳಿದುಹೋಗುತ್ತಾರೆ ಎನ್ನುವುದು ಹಣ ಕಳೆದುಕೊಂಡ ವ್ಯಕ್ತಿಯ ಅಳಲು.
“ಸರ್ ನಾನು ಮೊದಲು ಆಟೋ ಹತ್ತಿದೆ. ಆಮೇಲೆ ಒಬ್ಬ ಹತ್ತಿದ. ತುಸು ದೂರದಲ್ಲಿ ಇಬ್ಬರು ಹತ್ತಿದರು. ನಾಲ್ಕು ಜನ ಕುಳಿತುಕೊಳ್ಳಲು ಇಕ್ಕಟ್ಟು. ಆ ಕಾರಣಕ್ಕೆ ಒಬ್ಬ ಇಬ್ಬರ ತೊಡೆಯ ಮೇಲೆ ಕುಳಿತ. ಗಾಯತ್ರಿ ಟಾಕೀಸ್ ನಿಂದ ಮುಂದೆ ಹೋಗುತ್ತಿದ್ದಂತೆ ನನ್ನ ಬೆನ್ನಿಗೆ ಚಾಕು ಇಕ್ಕಿದ. ಉಸಿರು ಬಿಟ್ಟರೆ ಗೊತ್ತಲ್ಲ ಎಂದು ಬಲಭಾಗದ ಜೇಬಿನಲ್ಲಿದ್ದ ಹಣ ಕಸಿದ. ಇನ್ನೊಬ್ಬ ನನ್ನ ಮೊಬೈಲ್ ಕಿತ್ತುಕೊಂಡ. ಭದ್ರಮ್ಮ ಛತ್ರದ ಬಳಿ ಇಳಿದು ಹೋದರು.
“ಯಾಕೆ ಹಂಗಿದ್ದೀರ ಎಂದು ಆಟೋ ಚಾಲಕ ಕೇಳಿದ. ಪಿಕ್ ಪಾಕೇಟ್ ಮಾಡಿದ್ರು, ಮೊಬೈಲ್ ಕಿತ್ತುಕೊಂಡರು ಅಂದೆ. ಮತ್ತೆ ನನಗೆ ಹೇಳೋದಲ್ವಾ ಅಂದ ಚಾಲಕ. ಬೆನ್ನಿಗೆ ಚಾಕು ಇಟ್ಟಿದ್ದರು. ಉಸಿರು ಬಿಟ್ಟರೆ ಎಂಬ ಎಚ್ಚರಿಕೆಯೂ ಬಂತು. ಹಾಗಾಗಿ ಸುಮ್ಮನಾದೆ’ ಎಂದು ಸ್ನೇಹಿತರ ಬಳಿ ಪರಿಸ್ಥಿತಿಯನ್ನು ವಿವರಿಸಿದರು.
ಇಂತಹ ಪಿಕ್ ಪಾಕೇಠ್ ಘಟನೆಗಳನ್ನು ನೋಡಿರುವ ಆಟೋ ಚಾಲಕರು ಈಗ ಆತಂಕಕ್ಕೆ ಒಳಗಾಗಿದ್ದಾರೆ. ಪ್ರಯಾಣಿಕರು ನಮ್ಮ ಮೇಲೆ ಅನುಮಾನ ವ್ಯಕ್ತಪಡಿಸಬಹುದು. ಇದರಿಂದ ನಮ್ಮ ವ್ಯಾಪಾರಕ್ಕೆ ತೊಂದರೆಯಾಗುತ್ತದೆ. ವಿಶ್ವಾಸ ಇರುವವರು ನಿತ್ಯವೂ ನಮ್ಮ ಆಟೋಗಳನ್ನೇ ಬಳಸುತ್ತಾರೆ. ಅವರಿಗೆ ಇಂತಹ ತೊಂದರೆಯಾದರೆ ನಮ್ಮನ್ನು ನಂಬಿ ಬರುವ “ನಂಬಿಕಸ್ಥ ಪ್ರಯಾಣಿಕರಿಗೆ” ಮೋಸ ಮಾಡಿದಂತೆ ಆಗುತ್ತದೆ. ನಮ್ಮ ಬಗ್ಗೆ ಅವರು ಏನೆಂದುಕೊಂಡಾರು ಎಂಬ ಆತಂಕ ಚಾಲಕರನ್ನು ಕಾಡತೊಡಗಿದೆ.
ಪೊಲೀಸ್ ಇಲಾಖೆ ಪಿಕ್ ಪಾಕೇಟ್ ಕಳ್ಳರ ಹಾವಳಿಯಿಂದ ಪಾರುಮಾಡಬೇಕು. ಬೇರೆಯವರಿಗೆ ತೊಂದರೆ ಆಗದಂತೆ ಪೊಲೀಸ್ ಇಲಾಖೆ ಕ್ರಮ ವಹಿಸಬೇಕಾಗಿದೆ.
ಕೆ.ಈ.ಸಿದ್ದಯ್ಯ