ವೈದ್ಯಕೀಯ ಕೋರ್ಸ್ ಗಳಿಗೆ ಪ್ರವೇಶ ಪಡೆಯುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(NEET)ಯನ್ನು ರದ್ದುಪಡಿಸುವ ಹೊಸ ಮಸೂದೆಯನ್ನು ತಮಿಳುನಾಡು ವಿಧಾನಸಭೆ ಸೆಪ್ಟೆಂಬರ್ 13ರಂದು ಅಂಗೀಕರಿಸಿದೆ. ಬಿಜೆಪಿ ಸದಸ್ಯರನ್ನು ಹೊರತುಪಡಿಸಿ ಎಲ್ಲಾ ಪಕ್ಷಗಳು ಈ ಮಸೂದೆಯನ್ನು ಬೆಂಬಲಿಸಿವೆ.
ವಿಧಾನಸಭೆಯಲ್ಲಿ ಅಂಗೀಕಾರವಾಗಿರುವ ಪದವಿಪೂರ್ವ ವೈದ್ಯಕೀಯ ಪದವಿ ಕೋರ್ಸ್ ಮಸೂದೆಗೆ ರಾಷ್ಟ್ರಪತಿಗಳ ಒಪ್ಪಿಗೆ ಪಡೆಯಬೇಕಾಗಿದೆ.
ಇನ್ನು ಮುಂದೆ ಪದವಿಪೂರ್ವ ಮಂಡಳಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ವೈದ್ಯಕೀಯ ಕೋರ್ಸ್ ಗೆ ಪ್ರವೇಶ ಪಡೆಯಬಹುದಾಗಿದೆ. ಮುಂದಿನ ವರ್ಷದಿಂದ ಈ ನಿಯಮ ಜಾರಿಗೆ ಬರಲಿದೆ ಎಂದು ಎನ್.ಡಿ.ಟಿವಿ ವರದಿ ತಿಳಿಸಿದೆ.
ಬಿಜೆಪಿಯನ್ನು ಹೊರತುಪಡಿಸಿ ಮಸೂದೆಗೆ ಎಲ್ಲಾ ಪಕ್ಷಗಳ ಸದಸ್ಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ನಾವು ಬೆಂಬಲಿಸಿದ್ದೇವೆ. ಈ ತಂತ್ರಗಾರಿಕೆ ಕೆಲಸ ಮಾಡಲಿದೆ ಎಂದು ಎಐಎಡಿಎಂಕೆ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ವಿಜಯ ಭಾಸ್ಕರ್ ತಿಳಿಸಿದ್ದಾರೆ.
ದ್ರಾವಿಡ ಪಕ್ಷಗಳು NEET ಪರೀಕ್ಷೆಯನ್ನು ಹಿಂದಿನಿಂದಲೂ ವಿರೋಧಿಸಿಕೊಂಡು ಬಂದಿವೆ. ಖಾಸಗಿ ಕೋಚಿಂಗ್ ಸೆಂಟರ್ ಗಳಿಂದ ಬಡವರು ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಅನಾನುಕೂಲವೇ ಹೆಚ್ಚು ಎಂಬುದನ್ನು ಬೊಟ್ಟು ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ತಮಿಳುನಾಡಿನಲ್ಲಿ 10 ವರ್ಷ ಪ್ರವೇಶ ಪರೀಕ್ಷೆ ಇರಲಿಲ್ಲ. ಡಿಎಂಕೆ ರಾಷ್ಟ್ರಪತಿಗಳು ಒಪ್ಪಿಗೆ ಪಡೆದದ್ದರಿಂದ 12ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆಯೇ ವೈದ್ಯಕೀಯ ಕೋರ್ಸ್ ಗಳಿಗೆ ಪ್ರವೇಶ ಪಡೆಯಬಹುದಾಗಿತ್ತು. ಆದರೆ ಎಐಎಡಿಎಂಕೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ ರಾಷ್ಟ್ರಪತಿಗಳ ಒಪ್ಪಿಗೆ ಪಡೆಯಲು ಸಾಧ್ಯವಾಗಿರಲಿಲ್ಲ ಎಂದು ಎನ್.ಡಿ.ಟಿವಿ ವರದಲ್ಲಿ ತಿಳಿಸಿದೆ.
NEET ಪರೀಕ್ಷೆ ಮತ್ತು ನಾಯಿಕೊಡೆಗಳಂತೆ ಹುಟ್ಟಿಕೊಂಡ ಖಾಸಗಿ ಕೋಚಿಂಗ್ ಸೆಂಟರ್ ಗಳ ಹಾವಳಿಯಿಂದ ವಿದ್ಯಾರ್ಥಿಗಳ ಮೇಲಾದ ಪರಿಣಾಮಗಳ ಅಧ್ಯಯನಕ್ಕಾಗಿ ನಿವೃತ್ತ ನ್ಯಾಯಾಧೀಶ ಎ.ಕೆ.ರಾಜನ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು.
ಎನ್ಇಇಟಿ ಪರೀಕ್ಷೆಯಿಂದ ರಾಜ್ಯದ ಆರೋಗ್ಯ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರಿತ್ತು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾಕಷ್ಟು ವೈದ್ಯರ ಕೊರತೆ ಇತ್ತು ಎಂಬುದನ್ನು ಎ.ಕೆ.ರಾಜನ್ ಸಮಿತಿ ಗುರುತಿಸಿ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು.
ಎನ್ಇಇಟಿ ಪರೀಕ್ಷೆ ಕೇವಲ ಶ್ರೀಮಂತರು ಮತ್ತು ಎಲೈಟ್ ವರ್ಗಕ್ಕೆ ಬೇಕಾಗಿತ್ತು. ವಾರ್ಷಿಕ 2.5 ಲಕ್ಷ ಆದಾಯವುಳ್ಳ ನಗರ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು. ಹೀಗಾಗಿ ಸಮಿತಿ ಎನ್ಇಇಟಿ ಪರೀಕ್ಷೆಯನ್ನು ರದ್ದುಪಡಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿತ್ತು ಎಂದು ಹೇಳಲಾಗಿದೆ.