ಬೆಂಗಳೂರಿನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಿಧನರಾದ ಆಸ್ಕರ್ ಫರ್ನಾಂಡಿಸ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾಂಗ್ರೆಸ್ ನಾಯಕರು ಆಸ್ಕರ್ ಗುಣಗಾನ ಮಾಡಿ ನಿಸ್ವಾರ್ಥ ರಾಜಕಾರಣಿ, ಕಾರ್ಯಕರ್ತರನ್ನು ಅಪಾರವಾಗಿ ಪ್ರೀತಿಸುತ್ತಿದ್ದ ನಾಯಕ ಎಂದು ಬಣ್ಣಿಸಿದ್ದಾರೆ.
ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರಾದ ಎಂ.ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, “ಅವರು ಯಾವಾಗಲೂ ನಮ್ಮ ದೇಶ ಮತ್ತು ಕಾಂಗ್ರೆಸ್ ಪಕ್ಷದ ಕರುಣಾಳು ಆಗಿದ್ದರು. ನಿಸ್ವಾರ್ಥ ಮತ್ತು ಉದಾರವಾದಿ ರಾಜಕೀಯ ನಾಯಕರಾಗಿ ನೆನಪಿನಲ್ಲಿ ಉಳಿಯುತ್ತಾರೆ” ಎಂದು ಹೇಳಿದ್ದಾರೆ.
ಸಂಕಷ್ಟ ಸಮಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿದವರು. ನಾನು ಅವರ ಜೊತೆಯಲ್ಲಿ ಕೆಲಸ ಮಾಡಿದ್ದೇನೆ. ಅವರೊಬ್ಬ ಉತ್ತಮ ನಾಯಕರಾಗಿದ್ದರು ಎಂದು ತಿಳಿಸಿದ್ದಾರೆ.
ಕೆ.ಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಆಸ್ಕರ್ ಅವರಿಗೆ ಯಾವ ಕೆಟ್ಟ ಅಭ್ಯಾಸಗಳು ಇರಲಿಲ್ಲ. ಮುಂಜಾನೆಯಿಂದ ಬೆಳಗಿನಜಾವ 3 ಗಂಟೆಯವರೆಗೂ ಕಾರ್ಯಕರ್ತರನ್ನು ಭೇಟಿ ಮಾಡುತ್ತಿದ್ದರು. ಕಾರ್ಯಕರ್ತರೇ ಅವರ ಆಸ್ತಿ ಆಗಿದ್ದರು. ಯಾವ ಸ್ಥಾನದಲ್ಲಿದ್ದರೂ ಅವರು ಎಂದೂ ಗರ್ವಪಡಲಿಲ್ಲ ಎಂದರು.
ಕಾರ್ಯಕರ್ತರನ್ನು ಭೇಟಿ ಮಾಡುವುದು, ಅವರಲ್ಲಿ ಧೈರ್ಯ ತುಂಬುವುದು, ಮಾರ್ಗದರ್ಶನ ಮಾಡುವ ಕೆಲಸ ಮಾಡುತ್ತಿದ್ದರು. ಯುವಕರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಪಕ್ಷದಲ್ಲಿ ಹೊಸ ನಾಯಕತ್ವ ಬರಬೇಕೆಂಬ ಹಂಬಲ ಹೊಂದಿದ್ದರು ಎಂದು ಹೇಳಿದರು.


