ಬೇರೆ ರಾಜ್ಯಗಳಲ್ಲಿ ಪೆಟ್ರೋಲ್, ಡಿಸೆಲ್ ಬೆಲೆ ಎಷ್ಟಿದೆ ಎಂಬುದು ನಮಗೆ ಮುಖ್ಯವಲ್ಲ. ನಮ್ಮ ರಾಜ್ಯದ ಜನರಿಗೆ ಅನುಕೂಲವಾಗಬೇಕು. ಹಾಗಾಗಿ ಪೆಟ್ರೊಲಿಯಂ ಉತ್ಪನ್ನಗಳ ಮೇಲಿನ ತೆರಿಗೆಯನ್ನು ರಾಜ್ಯ ಸರ್ಕಾರ ಕಡಿತ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಕೇಂದ್ರದಲ್ಲಿ ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರವಿದ್ದಾಗ ಗ್ಯಾಸ್ ಬೆಲೆ 414 ರೂ ಇತ್ತು. ಇಂದು ಗ್ಯಾಸ್ ಬೆಲೆ 980 ರೂಪಾಯಿ ಆಗಿದೆ. ಇದರಿಂದ ಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ ಎಂದು ಆರೋಪಿಸಿದ್ದಾರೆ.
ಕೊರೊನದಿಂದ ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಬಡ, ಮಧ್ಯಮ ವರ್ಗದ ಜನರು ಹೇಗೆ ಬದುಕಬೇಕು? ಜನ ಬೀದಿಗಿಳಿಯದಿದ್ದರೂ ಜನರ ಪರವಾಗಿ ಕಾಂಗ್ರೆಸ್ ಪಕ್ಷ ಬೀದಿಗಿಳಿದು ಹೋರಾಟ ಮಾಡುತ್ತಿದೆ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಜನ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಮ್ಮೆ ಸಾಮಾಜಿಕ ಜಾಲತಾಣದ ಕಡೆಗೆ ಕಣ್ಣು ಹಾಯಿಸಿದರೆ ಜನರ ಆಕ್ರೋಶ ಎಷ್ಟಿದೆ ಎಂಬುದು ಗೊತ್ತಾಗುತ್ತದೆ ಎಂದು ಲೇವಡಿ ಮಾಡಿದ್ದಾರೆ.
1973ರಲ್ಲಿ ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ ಅವರು ಎತ್ತಿನಗಾಡಿ ಮೇಲೆ ಸಂಸತ್ ಭವನಕ್ಕೆ ಬಂದಿದ್ದರು ಅಂದು ಜನ ವಾಜಪೇಯಿ ಅವರಿಗೆ ನೀವು ಹೋರಾಟ ಮಾಡಿ ಎಂದಿದ್ದರಾ ಎಂದು ಬಿಜೆಪಿ ಮುಖಂಡರನ್ನು ಪ್ರಶ್ನಿಸಿದ್ದಾರೆ.
ಗ್ಯಾಸ್ ಬೆಲೆ ಏರಿಕೆ ವಿರೋಧಿಸಿ ಸಿಲಿಂಡರ್ ಅನ್ನು ತಲೆ ಮೇಲೆ ಹೊತ್ತು ಪ್ರತಿಭಟಿಸುತ್ತಿದ್ದ ಸಂಸದೆ ಶೋಭಾ ಕರಂದ್ಲಾಜೆ ಈಗ ಎಲ್ಲಿದ್ದಾರೆ. ಜನರಿಗೆ ಆಗುತ್ತಿರುವ ಅನ್ಯಾಯ ನೋಡಿಯೂ ಮಾತನಾಡಲಾಗದಂತಹ ಹುದ್ದೆಯಲ್ಲಿ ಅವರಿದ್ದರೆ ಆ ಹುದ್ದೆಯಲ್ಲಿ ಮುಂದುವರಿಯುವುದಕ್ಕಿಂತ ರಾಜಿನಾಮೆ ನೀಡುವುದು ಉತ್ತಮ ಎಂದು ಹೇಳಿದ್ದಾರೆ


