ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 108 ಆರೋಗ್ಯ ಕವಚ ತುರ್ತು ವೈದ್ಯಕೀಯ ಸೇವೆಗಾಗಿ ನೂತನ 120 ಆಂಬ್ಯುಲೆನ್ಸ್ ಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವರು 1 ಲಕ್ಷ ಜನರಿಗೆ ಒಂದು ಆಂಬ್ಯುಲೆನ್ಸ್ ಇದೆ. ಮುಂದಿನ ದಿನಗಳಲ್ಲಿ 40-50 ಸಾವಿರಕ್ಕೆ ಒಂದು ಅಂಬ್ಯುಲೆನ್ಸ್ ಬರಲಿದೆ ಎಂದು ಹೇಳಿದ್ದಾರೆ. ಆದರೂ ಬೆಂಗಳೂರಿನಲ್ಲಿ ಆರೋಗ್ಯ ಸಮಸ್ಯೆ ಇದೆ ಎಂದು ಹೇಳಿದರು.

ಆರೋಗ್ಯ ಸಚಿವರು ಬುದ್ದಿವಂತರು ಇದ್ದಾರೆ. ಒಮ್ಮೊಮ್ಮೆ ಬುದ್ದಿವಂತಿಕೆಯೂ ತೊಂದರೆ ಆಗುತ್ತದೆ ಎಂದು ಬೊಮ್ಮಾಯಿ ಮಾರ್ಮಿಕವಾಗಿ ತಿಳಿಸಿದರು.
ಆರೋಗ್ಯ ಸಚಿವ ಡಾ.ಸುಧಾಕರ್ ಮಾತನಾಡಿ, “ತುರ್ತು ಸಂದರ್ಭಗಳಲ್ಲಿ ಜೀವ ಉಳಿಸಲು ನಿರ್ಣಾಯಕ ಪಾತ್ರ ವಹಿಸುವ ಆಂಬ್ಯುಲೆನ್ಸ್ ಸೇವೆಯ ಜಾಲವನ್ನು ವಿಸ್ತರಿಸಿ, ಗುಣಮಟ್ಟ ಹೆಚ್ಚಿಸಲು ಆರೋಗ್ಯ ಕವಚ ಸೇವೆಗೆ ನೂತನ ಕಾಯಕಲ್ಪ ನೀಡಲಾಗುವುದು” ಎಂದರು.
ರಾಜ್ಯದಲ್ಲಿ 710 ಆಂಬ್ಯುಲೆನ್ಸ್ ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ 155 ಅಡ್ವಾನ್ಸ್ ಡ್ ಲೈಫ್ ಸಪೋರ್ಟ್ ಆಂಬ್ಯುಲೆನ್ಸ್ ಆಗಿವೆ. ಈಗ ಸೇವೆಗೆ ಲೋಕಾರ್ಪಣೆಗೊಂಡಿರುವ 120 ಆಂಬ್ಯುಲೆನ್ಸ್ ಗಳು ಇದೇ ತಂತ್ರಜ್ಞಾನವನ್ನು ಹೊಂದಿವೆ ಎಂದು ತಿಳಿಸಿದರು.


