ಆಗಸ್ಟ್ 11ರಂದು ಸಂಸತ್ ಅಧಿವೇಶನದ ವೇಳೆ ರಾಜ್ಯಸಭೆಯಲ್ಲಿ ನಡೆದ ಘಟನೆಯ ಕುರಿತು ತನಿಖೆ ನಡೆಸಲು ತನಿಖಾ ಸಮಿತಿ ರಚಿಸಿದ್ದು ಕಾಂಗ್ರೆಸ್ ಅದರ ಭಾಗವಾಗದಿರಲು ನಿರ್ಧರಿಸಿದೆ ಎಂದು ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿರುವ ಎಂ.ಮಲ್ಲಿಕಾರ್ಜುನ ಖರ್ಗೆ ಅವರು ಸಭಾಪತಿ ಎಂ.ವೆಂಕಯ್ಯನಾಯ್ಡು ಅವರಿಗೆ ಬರೆದಿರುವ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಅಧಿವೇಶನ ನಡೆಯುತ್ತಿದ್ದ ವೇಳೆ ಆಗಸ್ಟ್ 11ರಂದು ರಾಜ್ಯಸಭೆಯಲ್ಲಿ ‘ಹೊರಗಿನವರು’ ಮಹಿಳಾ ಸದಸ್ಯರೊಬ್ಬರ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಸಂಸದರನ್ನು ದೈಹಿಕವಾಗಿ ಹಿಡಿದು ಎಳೆದಾಡಿದ್ದರು ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ಈ ಘಟನೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿತ್ತು.
ಘಟನೆಯ ತನಿಖೆಗಾಗಿ ಸಭಾಪತಿ ಎಂ.ವೆಂಕಯ್ಯನಾಯ್ಡು ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿ ನೇಮಕ ಮಾಡಿದೆ. ಈ ಹಿನ್ನೆಲೆಯಲ್ಲಿ ಸಭಾಪತಿಗೆ ಪತ್ರ ಬರೆದಿರುವ ಖರ್ಗೆ, ತನಿಖಾ ಸಮಿತಿ ಸಂಸದರನ್ನು ಬೆದರಿಸುವ ತಂತ್ರವಾಗಿದೆ ಎಂದು ಆರೋಪಿಸಿದ್ದಾರೆ.
ಈ ನಡುವೆ ತೃಣಮೂಲ ಕಾಂಗ್ರೆಸ್, ಸಿಪಿಎಂ, ಕಾಂಗ್ರೆಸ್, ಸಿಪಿಐ, ರಾಷ್ಟ್ರೀಯ ಜನತಾ ದಳ, ಶಿವಸೇನಾ, ಎನ್.ಸಿ.ಪಿ ಮತ್ತು ಆಮ್ ಆದ್ಮಿ ಪಕ್ಷಗಳು ಕೂಡ ತನಿಖಾ ಸಮಿತಿಯ ಭಾಗವಾಗದಿರಲು ತೀರ್ಮಾನಿಸಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ ಪ್ರೆಸ್ ತಿಳಿಸಿದೆ.
ಸಂಸತ್ ಭದ್ರತಾ ಸಿಬ್ಬಂದಿಯಲ್ಲದ ಹೊರಗಿನವರು ಮೇಲ್ಮನೆಯಲ್ಲಿ ಸಂಸದರ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ. ಮಹಿಳಾ ಸದಸ್ಯರನ್ನು ಹಿಡಿದೆಳೆದಿದ್ದಾರೆ. ಸಂಸತ್ ಇತಿಹಾಸದಲ್ಲೇ ಇಂತಹ ಘಟನೆ ನಡೆದಿಲ್ಲ. ಸಂಸತ್ ನಲ್ಲಿ ಸೇನಾಡಳಿತವನ್ನು ಹೇರಲಾಗಿದೆ. ಪ್ರತಿಪಕ್ಷಗಳ ಸಂಸದರ ದನಿ ಅಡಗಿಸುವ ಕೆಲಸ ನಡೆಯುತ್ತಿದೆ ಎಂದು ಖರ್ಗೆ ಟೀಕಿಸಿದ್ದಾರೆ.
ಸದನದಲ್ಲಿ ಸಾರ್ವಜನಿಕ ಮಹತ್ವದ ವಿಷಯಗಳು ಪ್ರಮುಖವಾಗಿ ಚರ್ಚೆಯಾಗಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿದವು. ಆದರೆ ಯಾವುದೇ ಗಂಭೀರ ವಿಷಯಗಳ ಚರ್ಚೆಗೆ ಅವಕಾಶ ನೀಡಲಿಲ್ಲ. ಸದನ ಸಮಿತಿಯ ಮುಂದೆ ಯಾವುದೇ ವಿಷಯಗಳನ್ನು ತಾರದೆ ಮಸೂದೆ ಮತ್ತು ನೀತಿಗಳನ್ನು ಮಂಡಿಸಲಾಯಿತು ಎಂದು ಹೆಳಿದ್ದಾರೆ.
ಸದನದಲ್ಲಿ ಆರೋಗ್ಯಕರ ಚರ್ಚೆ ನಡೆಯುವಂತಹ ಪೂರಕ ವಾತಾವರಣವನ್ನು ನಿರ್ಮಿಸಬೇಕಾದ ಜವಾಬ್ದಾರಿ ಸರ್ಕಾರದ ಮೇಲಿತ್ತು. ಆದರೆ ಸದನದಲ್ಲಿ ಜನಪತ್ರಿನಿದಿಗಳ ದನಿಯನ್ನು ಹತ್ತಿಕ್ಕಲಾಯಿತು. ಹಾಗಾಗಿ ನಾವು ತನಿಖಾ ಸಮಿತಿಯ ವಿರುದ್ಧವಾಗಿದ್ದೇವೆ. ಮುಂದಿನ ಅಧಿವೇಶನದಲ್ಲಿ ಸರ್ವಪಕ್ಷಗಳ ಸಭೆ ಕರೆದು ಚರ್ಚೆಗೆ ಅವಕಾಶ ನೀಡಬೇಕು ಎಂದು ರಾಜ್ಯಸಭೆಯ ಸಭಾಪತಿಗೆ ಬರೆದಿರುವ ಪತ್ರದಲ್ಲಿ ಖರ್ಗೆ ಒತ್ತಾಯಿಸಿದ್ದಾರೆ.


