ಬೋಟ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಹಲವು ಮಂದಿ ಪ್ರಯಾಣಿಕರು ನಾಪತ್ತೆಯಾಗಿರುವ ಘಟನೆ ಅಸ್ಸಾಂ ರಾಜ್ಯದ ಬ್ರಹ್ಮಪುತ್ರ ನದಿಯಲ್ಲಿ ಸಂಭವಿಸಿದೆ. ನಾಪತ್ತೆಯಾಗಿರುವ ಪ್ರಯಾಣಿಕರನ್ನು ರಕ್ಷಿಸುವ ಕಾರ್ಯಾಚರಣೆ ತೀವ್ರಗತಿಯಲ್ಲಿ ನಡೆದಿದೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ.
‘ಮಾ ಕಮಲ’ ಹೆಸರಿ ಖಾಸಗಿ ಬೋಟ್ ಸೀಮಾಟಿಘಾಟ್ ನಿಂದ ಮಜ್ಲಿ ನದಿ ದ್ವೀಪಕ್ಕೆ ತೆರಳುತ್ತಿತ್ತು. ಮಜಲಿಯಿಂದ ಬರುತ್ತಿದ್ದ ತ್ರಿಪಕೈ ಹೆಸರಿನ ಬೋಟ್, ಇಂದು ಸಂಜೆ 4.30ರಲ್ಲಿ ಖಾಸಗಿ ಬೋಟ್ ಗೆ ಡಿಕ್ಕಿ ಹೊಡೆದಿದೆ. ಖಾಸಗಿ ಬೋಟ್ ನಲ್ಲಿ 120 ಮಂದಿ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ.
ಬೋಟ್ ಗಳು ಮುಖಾಮುಖಿ ಡಿಕ್ಕಿಯಾಗಿದೆ. ಈ ಸಂದರ್ಭದಲ್ಲಿ ಪ್ರಯಾಣಿಕರು ನೀರಿನಲ್ಲಿ ಮುಳುಗಿದ್ದಾರೆ. 30ಕ್ಕೂ ಹೆಚ್ಚು ಪ್ರಯಾಣಿಕರು ಈಜಿ ನದಿ ದಡ ಸೇರಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡ ತೆರಳಿದ್ದು ರಕ್ಷಣಾ ಕಾರ್ಯ ಮುಂದುವರಿಸಿದೆ. ನೀರಿನಲ್ಲಿ ಮುಳುಗಿದ್ದ 41 ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೋಟ್ ನಲ್ಲಿ ನಾಲ್ಕು ಚಕ್ರದ ವಾಹನಗಳು ಮತ್ತು ದ್ವಿಚಕ್ರ ವಾಹನಗಳು ಇದ್ದವು. ಬೋಟ್ ಡಿಕ್ಕಿಯಿಂದ ಆ ವಾಹನಗಳೆಲ್ಲವೋ ನೀರಿನಲ್ಲಿ ಮುಳುಗಿಹೋಗಿವೆ.