ಲೋಕಜನಶಕ್ತಿ ಪಕ್ಷದ ಸಂಸದ ಚಿರಾಗ್ ಪಾಸ್ವಾನ್ ಅವರು ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಅವರನ್ನು ಭೇಟಿಯಾಗಿರುವುದು ಮುಂದಿನ ಚುನಾವಣೆಯಲ್ಲಿ ಎಲ್.ಜೆ.ಪಿ-ಆರ್.ಜೆ.ಡಿ ಮೈತ್ರಿ ಮಾಡಿಕೊಳ್ಳಬಹುದೆಂಬ ಊಹಾಪೋಹಗಳು ರಾಜಕೀಯ ವಲಯದಲ್ಲಿ ಕೇಳಿಬಂದಿದೆ.
ಎಲ್.ಜೆ.ಪಿ. ಮುಖ್ಯಸ್ಥ ರಾಮವಿಲಾಸ್ ಪಾಸ್ವಾನ್ ಮರಣಹೊಂದಿ ಮೊದಲ ವರ್ಷದ ಸಂಸ್ಮರಣೆ ಕಾರ್ಯಕ್ರಮ ಸೆಪ್ಟೆಂಬರ್ 12ರಂದು ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಅವರನ್ನು ಆಹ್ವಾನಿಸಲು ಚಿರಾಗ್ ಪಾಸ್ವಾನ್ ಪಾಟ್ನಾಕ್ಕೆ ಬಂದಿದ್ದರು ಎಂದು ಎನ್.ಡಿ.ಟಿವಿ ವರದಿ ಮಾಡಿದೆ.
ಮುಂದಿನ ಚುನಾವಣೆಯಲ್ಲಿ ಔಪಚಾರಿಕ ಮೈತ್ರಿಯ ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಉಭಯ ನಾಯಕರು ನಿರಾಕರಿಸಿದ್ದಾರೆ. ರಾಮ್ ವಿಲಾಸ್ ಪಾಸ್ವಾನ್ ಮತ್ತು ಲಾಲೂ ಪ್ರಸಾದ್ ಯಾದವ್ ಇಬ್ಬರು ಸ್ನೇಹಿತರು. ಎರಡು ಕುಟುಂಬಗಳ ನಡುವೆ ಉತ್ತಮ ಸಂಬಂಧವಿದೆ. ನನ್ನ ತಂದೆ ಮತ್ತು ಲಾಲೂ ಜೊತೆಯಲ್ಲಿ ಕೆಲಸ ಮಾಡಿದವರು. ಇಂತಹ ಕಾರ್ಯಕ್ರಮದಲ್ಲಿ ಲಾಲೂ ಭಾಗಿಯಾಗುವುದು ನನ್ನ ತಂದೆಯ ಬಯಕೆಯಾಗಿತ್ತು ಎಂದು ಚಿರಾಗ್ ಹೇಳಿದ್ದಾರೆ.
ಲಾಲು ಪ್ರಸಾದ್ ಯಾದವ್ ದೆಹಲಿಯಲ್ಲಿದ್ದಾರೆ. ಅಲ್ಲಿಯೇ ಅವರನ್ನು ಭೇಟಿಯಾಗಿ ತಂದೆಯ ಮೊದಲ ಪುಣ್ಯಸ್ಮರಣೆಗೆ ವೈಯಕ್ತಿಕವಾಗಿ ಆಹ್ವಾನ ನೀಡುತ್ತೇನೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತೇನೆ. ಸಿಎಂ ಭೇಟಿಗೆ ಸಮಯ ಕೊಟ್ಟಿಲ್ಲ. ಮುಖ್ಯಮಂತ್ರಿಗಳನ್ನು ಭೇಟಿಯಾಗುವುದು ಅಷ್ಟು ಸುಲಭವೂ ಅಲ್ಲ. ನನಗೆ ಸಿಎಂ ಭೇಟಿಯಾಗಲು ಅವಕಾಶ ನೀಡದಿದ್ದರೂ ಜನರನ್ನು ಕಾರ್ಯಕ್ರಮಕ್ಕೆ ಕಳಿಸಲಿ ಎಂದು ವ್ಯಂಗ್ಯ ಮಾಡಿದ್ದಾರೆ.
ಆರ್.ಜೆ.ಡಿ ಮುಖಂಡ ತೇಜಸ್ವಿ ಯಾದವ್ ಮಾತನಾಡಿ, “ನಾವಿಬ್ಬರೂ 2010ರಲ್ಲಿ ರಾಜಕೀಯಕ್ಕೆ ಪ್ರವೇಶ ಮಾಡಿದ್ದೇವೆ. ನಾವು ರಾಮ್ ವಿಲಾಸ್ ಪಾಸ್ವಾನ್ ಅವರಿಂದ ಸಾಕಷ್ಟು ಕಲಿತಿದ್ದೇವೆ” ಎಂದು ಹೇಳಿದ್ದಾರೆ.
ತೇಜಸ್ವಿ ಯಾದವ್ ಭೇಟಿಗೆ ರಾಜಕೀಯ ಬಣ್ಣ ಕಲ್ಪಿಸಬೇಡಿ. ಸ್ವಇಚ್ಚೆಯಿಂದ ನಾನು ಇಲ್ಲಿಗೆ ಭೇಟಿ ನೀಡಿದ್ದೇನೆ. ಭವಿಷ್ಯದ ರಾಜಕೀಯ ಮೈತ್ರಿಯ ಪ್ರಶ್ನೆಗಳಿಗೆ ಉತ್ತರಿಸಲು ಇದು ಸಕಾಲವಲ್ಲ ಎಂದು ಚಿರಾಗ್ ಸ್ಪಷ್ಟಪಡಿಸಿದರು.