ಕೇಂದ್ರ ಸರ್ಕಾರ 2019ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ತಮಿಳುನಾಡು ಸರ್ಕಾರ ಮಂಗಳವಾರ ನಿರ್ಣಯ ಅಂಗೀಕರಿಸಿದೆ.
ಒಕ್ಕೂಟ ಸರ್ಕಾರದ ಸಿಎಎ ಕಾಯ್ದೆ ಸಂವಿಧಾನದ ಜಾತ್ಯತೀತ ತತ್ವಗಳಿಗೆ ಹೊಂದಾಣಿಕೆಯಾಗುವುದಿಲ್ಲ. ದೇಶದ ಕೋಮು ಸಾಮರಸ್ಯಕ್ಕೆ ಸಹಕಾರಿಯಾಗಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ.
ಈಗಿರುವ ಪ್ರಜಾಪ್ರಭುತ್ವ ತತ್ವಗಳು ಎಲ್ಲಾ ಜನರ ಬಗ್ಗೆ ಕಾಳಜಿಯನ್ನು ಹೊಂದಿವೆ. ಎಲ್ಲರನ್ನು ಸಮಾನದೃಷ್ಟಿಯಿಂದ ಕಾಣುತ್ತವೆ. ಆದರೆ ಪೌರತ್ವ ತಿದ್ದುಪಡಿ ಕಾಯ್ದೆಯು ಈ ತತ್ವಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಪಾಕಿಸ್ತಾನ, ಆಫ್ಘಾನಿಸ್ತಾನದ ಹಿಂದೂ,ಸಿಖ್, ಜೈನ, ಕ್ರಿಶ್ಚಿಯನ್, ಪಾರ್ಸಿ, ಬೌದ್ಧ ಈ ಆರು ಧರ್ಮೀಯರಿಗೆ ಮಾತ್ರ ಭಾರತದಲ್ಲಿ ಪೌರತ್ವದ ಹಕ್ಕು ನೀಡುತ್ತದೆ. ಮುಸ್ಲೀಮರನ್ನು ಕೈಬಿಡಲಾಗಿದೆ. ಧರ್ಮ ಮತ್ತು ಹುಟ್ಟಿದ ದೇಶದ ಆಧಾರದ ಮೇಲೆ ತಾರತಮ್ಯ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ದೇಶದ ಐಕ್ಯತೆ, ಕೋಮುಸಾಮರಸ್ಯ ಹಾಗೂ ಜಾತ್ಯತೀತ ಮೌಲ್ಯಗಳನ್ನು ಎತ್ತಿಹಿಡಿಯಲು ಎಲ್ಲರೂ ಒಂದಾಗಬೇಕು ಎಂದು ಹೇಳಿರುವ ಸ್ಟಾಲಿನ್ ಶ್ರೀಲಂಕಾದ ತಮಿಳರ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ ಎಂದು ಟೀಕಿಸಿದ್ದಾರೆ