Sunday, December 22, 2024
Google search engine
Homeಮುಖಪುಟಹಿಂದಿ ದಿವಸ ಆಚರಣೆಗೆ ರಕ್ಷಣಾ ವೇದಿಕೆ ವಿರೋಧ

ಹಿಂದಿ ದಿವಸ ಆಚರಣೆಗೆ ರಕ್ಷಣಾ ವೇದಿಕೆ ವಿರೋಧ

ಸೆಪ್ಟೆಂಬರ್ 14ರಂದು ಒಕ್ಕೂಟ ಸರ್ಕಾರ ಹಿಂದಿ ದಿವಸ ಆಚರಣೆ ಮಾಡುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ವರೋಧಿಸುತ್ತದೆ ಮತ್ತು ರಾಜ್ಯದ ಎಲ್ಲಾ ಭಾಗಗಳಲ್ಲೂ ರಾಷ್ಟ್ರೀಕೃತ ಮತ್ತು ಗ್ರಾಮೀಣ ಬ್ಯಾಂಕುಗಳ ಮುಂದೆ ಸಾವಿರಾರು ಪ್ರತಿಭಟನೆಗಳು ನಡೆಯಲಿವೆ ಎಂದು ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.

ಹಿಂದಿ ಹೇರಿಕೆಯ ಪರಿಣಾಮದಿಂದ ಕೇಂದ್ರ ಸರ್ಕಾರದ ಉದ್ಯೋಗಗಳು ಹಿಂದಿ ಭಾಷಿಕರ ಪಾಲಾಗುತ್ತಿವೆ. ಕನ್ನಡದ ಮಕ್ಕಳು ನಿರುದ್ಯೋಗ ಸಮಸ್ಯೆ ಎದುರಿಸುವಂತಾಗಿದೆ. ಕರ್ನಾಟಕಕ್ಕೆ ಉತ್ತರ ರಾಜ್ಯಗಳಿಂದ ವಲಸೆ ಬರುವುದು ವಿಪರೀತವಾಗಿದೆ. ಕನ್ನಡಿಗರ ಅಸ್ಮಿತೆ, ಸಂಸ್ಕೃತಿ, ಪರಂಪರೆ ಮತ್ತು ಬದುಕು ಅಪಾಯದಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಒಕ್ಕೂಟ ಸರ್ಕಾರ ಸಂವಿಧಾನದ 343 ರಿಂದ 351ರವರೆಗಿನ ಪರಿಚ್ಛೇದಗಳಿಗೆ ತಿದ್ದುಪಡಿ ತಂದು ಹಿಂದಿ ಭಾಷೆಗೆ ನೀಡಲಾಗಿರುವ ವಿಶೇಷ ಅವಕಾಶಗಳನ್ನು ತೆಗೆದುಹಾಕದೆ ಹೋದರೆ ಭಾರತೀಯರೆಲ್ಲರೂ ಸಮಾನರಾಗಲು ಸಾಧ್ಯವೇ ಇಲ್ಲ. ಭಾಷೆಯ ಹೆಸರಿನ ತಾರತಮ್ಯ ಕೊನೆಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಸಂವಿಧಾನದ 14ನೇ ಪರಿಚ್ಛೇದದಲ್ಲಿ ಪ್ರತಿಯೊಬ್ಬ ಭಾರತೀಯನಿಗೂ ಸಮಾನ ಹಕ್ಕನ್ನು ನೀಡಲಾಗಿದೆ. ಹಿಂದಿ ದಿವಸ ಆಚರಣೆ ಮೂಲಕ ಇತರ ಭಾರತೀಯ ಭಾಷೆಗಳನ್ನು ಕಡೆಗಣಿಸಿ ಇತರ ಭಾಷಿಕರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿ ಮಾಡುವುದು ಅಕ್ಷಮ್ಯ. ಇದು ಕೊನೆಗಾಣಬೇಕು ಎಂದು ಹೇಳಿದ್ದಾರೆ.

ಹಿಂದಿ ಹೇರಿಕೆಯನ್ನು ಇಡೀ ದೇಶಕ್ಕೆ ಬಳಸುವುದು ಪ್ರಮುಖ ಉದ್ದೇಶವಾಗಿದೆ. ಹಿಂದಿ ಭಾಷಿಕರಿಗೆ ಎಲ್ಲಾ ರಾಜ್ಯಗಳಲ್ಲೂ ಅಗತ್ಯ ಸೇವೆ ಕಲ್ಪಿಸುವುದೇ ಆಗಿದೆ. ಈ ಮೂಲಕ ಇತರ ಭಾಷಿಕರಿಗೆ ಇಲ್ಲದ ಸೌಲಭ್ಯಗಳನ್ನು ಹಿಂದಿ ಭಾಷಿಕರಿಗೆ ನೀಡುವುದು ಹಿಂದಿ ದಿವಸ ಆಚರಣೆಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

ಕನ್ನಡಿಗರ ತೆರಿಗೆ ಹಣದಲ್ಲಿ ನಡೆಸಲಾಗುವ ಹಿಂದಿ ದಿವಸ ಆಚರಣೆ ಕನ್ನಡಿಗರಿಗೆ ಬೇಕಾಗಿಲ್ಲ. ಭಾಷಾ ವೈವಿಧ್ಯತೆ ಭಾರತದಲ್ಲಿ ಒಂದು ಭಾಷೆಯನ್ನು ಹೊತ್ತು ಮೆರೆಸುವುದು ಅಗತ್ಯವಿಲ್ಲ. ಭಾರತೀಯ ಭಾಷೆಗಳಲ್ಲಿ ಹಿಂದಿಯೂ ಒಂದು ಭಾಷೆಯಾಗಿದ್ದು ಅದಕ್ಕೆ ವಿಶೇಷ ಮಹತ್ವ ನೀಡುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಒಕ್ಕೂಟ ಸರ್ಕಾರ ಯಾವುದೇ ಪಕ್ಷ ಹಿಡಿದರೂ ಹಿಂದಿ ಹೇರಿಕೆಯನ್ನು ಎಗ್ಗಿಲ್ಲದೆ ನಡೆಸುತ್ತ ಬಂದಿದೆ. ಕಳೆದ 20 ವರ್ಷಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಿಂದಿ ದಿವಸ ಆಚರಣೆಯನ್ನು ವಿರೋಧಿಸಿಕೊಂಡೇ ಬರುತ್ತಿದೆ. ಹಿಂದಿ ಹೇರಿಕೆಯಿಂದ ಭಾರತೀಯರಲ್ಲಿ ಸಮಾನತೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular