ಪ್ರತಿಭಟನಾನಿರತ ರೈತರ ಮೇಲೆ ಲಾಠಿಚಾರ್ಜ್ ನಡೆಸಿದ ಪೊಲೀಸರು ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹರ್ಯಾಣದ ಕರ್ನಾಲ್ ನಲ್ಲಿ ಮಿನಿ ಸಚಿವಾಲಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ರೈತ ನಾಯಕರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾದ ಯೋಗೇಂದ್ರ ಯಾದವ್, ಭಾರತ್ ಕಿಸಾನ್ ಒಕ್ಕೂಟದ ರಾಕೇಶ್ ಟಿಕಾಯತ್, ಗುರುನಾಮ್ ಸಿಂಗ್ ಚದೂಣಿ ಸೇರಿದಂತೆ ಇತರೆ ರೈತ ಮುಖಂಡರನ್ನು ಬಂಧಿಸಲಾಗಿದೆ.
ಮಹಾಪಂಚಾಯತ್ ಕಾರ್ಯಕ್ರಮ ಮುಗಿಸಿ ಕರ್ನಾಲ್ ನ ಮಿನಿ ಸಚಿವಾಲಯಕ್ಕೆ ಮುತ್ತಿಗೆ ಹಾಕಲು ರ್ಯಾಲಿಯಲ್ಲಿ ಬರುತ್ತಿದ್ದ ವೇಳೆ ಈ ಮುಖಂಡರ ಬಂಧನವಾಗಿದೆ.
ಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ರೈತರು ಮಿನಿ ಸಚಿವಾಲಯದ ಅನತಿದೂರದಲ್ಲಿ ಹಾಕಿದ್ದ ಬ್ಯಾರಿಕೇಡ್ ಗಳನ್ನು ಪಕ್ಕಕ್ಕೆ ಸರಿಸಿ ಮುಂದೆ ಸಾಗುತ್ತಿದ್ದಂತೆಯೇ ಪೊಲೀಸರು ಪ್ರತಿಭಟನಾನಿರತ ರೈತರ ಮೇಲೆ ಜಲಪಿರಂಗಿ ಪ್ರಯೋಗಿಸಿದ್ದಾರೆ ಎಂದು ಜೈ ಕಿಸಾನ್ ಟ್ವಿಟ್ಟರ್ ಖಾತೆಯಲ್ಲಿ ಪೋಟೋ ಹಂಚಿಕೆ ಮಾಡಲಾಗಿದೆ.
ಹರ್ಯಾಣ ಸರ್ಕಾರ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಜಲಪಿರಂಗಿ ಪ್ರಯೋಗ ನಡೆಸಿದೆ. ಇದರಿಂದ ರೈತರ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಜಿಲ್ಲಾಡಳಿತದೊಂದಿಗೆ ಮಾತುಕತೆ ವಿಫಲವಾಗಿದೆ. ಮುಂದಿನ ತೀರ್ಮಾನ ಶೀಘ್ರವೇ ಕೈಗೊಳ್ಳುತ್ತೇವೆ ಎಂದು ಟಿಕಾಯತ್ ತಿಳಿಸಿದ್ದಾರೆ.