ಎಲ್ಗಾರ್ ಪರಿಷತ್ ಕಾರ್ಯಕ್ರಮ ಸಂಘಟಕರೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದ ಖೈದಿಗಳ ಹಕ್ಕು ಹೋರಾಟಗಾರ ರೋಣ ವಿಲ್ಸನ್ ಅವರಿಗೆ ಎನ್.ಐ.ಎ ನ್ಯಾಯಾಲಯ ತಾತ್ಕಾಲಿಕ ಜಾಮೀನು ಮಂಜೂರು ಮಾಡಿದೆ ಎಂದು ದಿ ವೈರ್ ವರದಿ ಮಾಡಿದೆ.
ತಂದೆಯ ಕಾರ್ಯದಲ್ಲಿ ಪಾಲ್ಗೊಳ್ಳಲು ರೋಣ ವಿಲ್ಸನ್ ಅವರಿಗೆ 2 ವಾರಗಳ ತಾತ್ಕಾಲಿ ಜಾಮೀನು ಮಂಜೂರು ಮಾಡಿದೆ. ತಂದೆ ಮರಣ ಹೊಂದಿ 30 ದಿನಗಳ ನಂತರದ ಕಾರ್ಯಕ್ರಮದಲ್ಲಿ ತಂದೆ ಅಂತಿಮ ವಿಧಿವಿಧಾನಗಳನ್ನು ಪೂರೈಸಲು ಮಧ್ಯಂತರ ಜಾಮೀನು ನೀಡುವಂತೆ ಮಾಡಿದ ಮನವಿಗೆ ನ್ಯಾಯಾಲಯ ಷರತ್ತುಬದ್ದ ಜಾಮೀನು ನೀಡಿದೆ.
ಎಲ್ಗಾರ್ ಪರಿಷತ್ ಕಾರ್ಯಕ್ರಮದ ಸಂಪರ್ಕ ಹೊಂದಿದ ಆರೋಪ ಮೇಲೆ ‘ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ರೋಣ ವಿಲ್ಸನ್ ಅವರನ್ನು 2018ರಲ್ಲಿ ಪುಣೆ ಪೊಲೀಸರು ಬಂಧನ ಮಾಡಿದ್ದರು.
ರೋಣ ವಿಲ್ಸನ್ ಪರ ವಕೀಲ ನೀರಜ್ ಯಾದವ್, “ನನ್ನ ಕಕ್ಷೀದಾರರ ತಂದೆ ಆಗಸ್ಟ್ 18, 2021ರಂದು ಮರಣ ಹೊಂದಿದ್ದಾರೆ. ತಂದೆ ತೀರಿಕೊಂಡ 30ದಿನದಲ್ಲಿ ಅಂತ್ಯಕ್ರಿಯಾ ವಿಧಿವಿಧಾನಗಳನ್ನು ನೆರವೇರಿಸುವ ಸಂಬಂಧ ಸೆಪ್ಟೆಂಬರ್ 16, 2021ರಂದು ಚರ್ಚ್ ನಲ್ಲಿ ಸಾಮೂಹಿಕ ಕಾರ್ಯಕ್ರಮ ಆಯೋಜಿಸಿದೆ. ಕುಟುಂಬದ ಸದಸ್ಯರನ್ನು ಭೇಟಿ ಮಾಡಬೇಕು ಮತ್ತು ಇಡೀ ಕುಟುಂಬದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಾಗಿದೆ. ಹಾಗಾಗಿ ಮಧ್ಯಂತರ ಜಾಮೀನು ನೀಡುವಂತೆ” ನ್ಯಾಯಾಲಯವನ್ನು ಕೋರಿದರು.
ರೋಣ ವಿಲ್ಸನ್ ಮಧ್ಯಂತರ ಜಾಮೀನು ಅರ್ಜಿಗೆ ವಿರೋಧ ವ್ಯಕ್ತಪಡಿಸಿದ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು “ತಂದೆಯ ಮರಣದ ಬಳಿಕ ನಡೆಸುವ ಅಂತ್ಯಕ್ರಿಯೆ ಮುಗಿದುಹೋಗಿದೆ. ಹಾಗಾಗಿ ವಿಲ್ಸನ್ ಪಾಲ್ಗೊಳ್ಳುವ ಅವಶ್ಯಕತೆ ಬರುವುದಿಲ್ಲ. ಈಗಿನ ಸಾಮೂಹಿಕ ಕಾರ್ಯಕ್ರಮದಲ್ಲಿ ವಿಲ್ಸನ್ ಸಹೋದರ ಮತ್ತು ಇತರರು ಭಾಗವಹಿಸಬಹುದು’ ಎಂದು ನ್ಯಾಯಾಲಯದ ಗಮನ ಸೆಳೆದರು.
ರೋಣ ವಿಲ್ಸನ್ ಮನವಿಯನ್ನು ಪುರಸ್ಕರಿಸಿದ ಎನ್ಐಎ ವಿಶೇಷ ನ್ಯಾಯಾಧೀಶ ಡಿ.ಇ. ಕೊತವಿಕರ್ ಸೆಪ್ಟೆಂಬರ್ 13 ರಿಂದ ಸೆ.27ರವರೆಗೆ ಜಾಮೀನು ನೀಡಿದರು. 50 ಸಾವಿರ ಬಾಂಡ್ ಮತ್ತು ಇಬ್ಬರು ಜಾಮೀನು ನೀಡಬೇಕು. ಪ್ರಯಾಣ ವಿವರವನ್ನು ಎನ್ಐಎ ಅಧೀಕ್ಷರಿಗೆ ಕೊಡಬೇಕು. ಪಾಸ್ ಪೋಟೋವನ್ನು ನ್ಯಾಯಾಲಯದ ವಶಕ್ಕೆ ನೀಡಬೇಕು ಎಂದು ಹೇಳಿದರು.
ಅಲ್ಲದೆ ಸೆಪ್ಟೆಂಬರ್ 14ರಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ವರದಿ ಮಾಡಿಕೊಳ್ಳಬೇಕು. ಸೆ.24ರಂದು ವರದಿ ಮಾಡಿಕೊಂಡು ಕೇರಳ ತೊರೆಯಬಾರದು ಎಂದು ಷರತ್ತು ವಿಧಿಸಲಾಗಿದೆ ಎಂದು ವೈರ್ ವರದಿ ಮಾಡಿದೆ.