ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳು ದೊಡ್ಡದೊಡ್ಡ ಹೇಳಿಕೆಗಳನ್ನು ನೀಡುತ್ತಿವೆಯಾದರೂ ತಳಮಟ್ಟದಲ್ಲಿ ಯಾವುದೇ ಕೆಲಸಗಳು ಆಗಿಲ್ಲ. ಹಾಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ದಲಿತ-ಬ್ರಾಹ್ಮಣರ ಏಕತೆ ಸಾಧಿಸಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.
ಒಂದು ತಿಂಗಳ ದೀರ್ಘಕಾಲ ನಡೆದ ಪ್ರಬುದ್ಧ ವರ್ಗ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು “ಪಕ್ಷದ ಕಾರ್ಯಕ್ರಮಗಳು ಉನ್ನತ ವರ್ಗದ ಬ್ರಾಹ್ಮಣರಿಗೆ ತಲುಪಿಸಬೇಕು. ದಲಿತರು ಮತ್ತು ಬ್ರಾಹ್ಮಣರ ಮತಗಳನ್ನು ಪಡೆಯಲು ಬಿಜೆಪಿ ಮತ್ತು ಎಸ್.ಪಿ ಬರೀ ಮಾತಿನಲ್ಲೇ ಕಾಲ ಕಳೆಯುತ್ತಿದ್ದಾರೆ” ಎಂದು ದೂರಿದರು.
“ನನ್ನ ನಡೆ-ನುಡಿಯ ಬಗ್ಗೆ ನಾನು ಖಚಿತ ನಿಲುವು ಹೊಂದಿದ್ದೇನೆ. ಆ ನಿಲುವುಗಳೇನೆಂಬುದು 2007 ರಿಂದ 2012ರವರೆಗಿನ ಅವಧಿಯಲ್ಲಿ ಜನರಿಗೆ ಅರ್ಥವಾಗಿದೆ. ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ದಲಿತರು ಮತ್ತು ಬ್ರಾಹ್ಮಣರು ಮತ್ತು ಇತರೆ ಸಮುದಾಯಗಳಿಗೆ ಮೊದಲ ಆದ್ಯತೆ ನೀಡಿದ್ದೆ” ಎಂದು ತಿಳಿಸಿದ್ದಾರೆ.
ಮೀರತ್ ಮತ್ತು ಮುಝಫರ್ ನಗರದಲ್ಲಿ ಕೋಮುಗಲಭೆ ನಡೆದಾಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಲಿಲ್ಲ ಎಂದು ಆರೋಪಿಸಿದ ಅವರು 2022ರ ವಿಧಾನಸಭಾ ಚುನಾವಣೆಗಳಲ್ಲಿ ಬಹುಜನ ಸಮಾಜ ಪಕ್ಷ ಅಧಿಕಾರಕ್ಕೆ ಬಂದರೆ ದಲಿತರು ಮತ್ತು ಬ್ರಾಹ್ಮಣರ ಮೇಲೆ ನಡೆದಿರುವ ದೌರ್ಜನ್ಯಗಳನ್ನು ತನಿಖೆಗೆ ಒಳಪಡಿಸುತ್ತೇನೆ” ಎಂದು ಭರವಸೆ ನೀಡಿದರು.
ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯ ಟಿಕೆಟ್ ಗಳನ್ನು ಬ್ರಾಹ್ಮಣರಿಗೆ ನೀಡುವುದಾಗಿಯೂ ಹೇಳಿದರು.
ವಿವಾದಾತ್ಮಕ ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಹೋರಾಟವನ್ನು ಬೆಂಬಿಸುವುದಾಗಿ ಹೇಳಿದ ಮಾಯಾವತಿ ಉತ್ತರ ಪ್ರದೇಶದಲ್ಲಿ ಬಿಎಸ್.ಪಿ ಅಧಿಕಾರಕ್ಕೆ ಬಂದರೆ ರೈತ ವಿರೋಧಿ ಕಾಯ್ದೆಗಳನ್ನು ರಾಜ್ಯದಲ್ಲಿ ಅನುಷ್ಟಾನಕ್ಕೆ ತರುವುದಿಲ್ಲವೆಂದು ಭರವಸೆ ನೀಡಿದ್ದಾರೆ.