ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ಕರ್ನಾಲ್ ಜಿಲ್ಲಾ ಕೇಂದ್ರದಲ್ಲಿ ಕಿಸಾನ್ ಪಂಚಾಯತ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಹರ್ಯಾಣ ಸರ್ಕಾರ ಕರ್ನಾಲ್ ಜಿಲ್ಲಾದ್ಯಂತ ಇಂದು ಮಧ್ಯಾಹ್ನ 12.30ರಿಂದ ಸೆಪ್ಟೆಂಬರ್ 7ರ ಮಧ್ಯರಾತ್ರಿವರೆಗೆ ಇಂಟರ್ ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ.
ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಿಸುವ ದೃಷ್ಟಿಯಿಂದ ಅಂತರ್ಜಾಲ ಸೇವೆಗಳನ್ನು 36 ಗಂಟೆಗಳ ಕಾಲ ಅಮಾನತು ಮಾಡಲಾಗಿದೆ ಎಂದು ಹರ್ಯಾಣ ಸರ್ಕಾರ ಸ್ಪಷ್ಟನೆ ನೀಡಿದೆ.
ಜಿಲ್ಲಾಧಿಕಾರಿ ನಿಶಾಂತ ಕುಮಾರ್ ಯಾದವ್ ಮಾತನಾಡಿ ಅಧಿಕಾರಿಗಳು ರೈತರ ಹೆದ್ದಾರಿ ಬಂದ್ ಮತ್ತು ಮಿನಿವಿಧಾನಸೌಧಕ್ಕೆ ಮುತ್ತಿಗೆ ಹಾಕುವುದನ್ನು ತಡೆಯಬೇಕು ಎಂದು ಹೇಳಿದ್ದಾರೆ.
“ನಾವು ರೈತರ ಜೊತೆ ಮಾತನಾಡುತ್ತೇವೆ. ಆದರೆ ಅವರ ಬೇಡಿಕೆಗಳು ನ್ಯಾಯಸಮ್ಮತವಾಗಿಲ್ಲ. ಕಾನೂನು ಉಲ್ಲಂಘಿಸುವವರಿಗೆ ನೆರವು ನೀಡುವುದಿಲ್ಲ ಮತ್ತು ನಮ್ಮ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಜರುಗಿಸುವುದಿಲ್ಲ” ಎಂದು ಜಿಲ್ಲಾಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಹರ್ಯಾಣ ಭಾರತ್ ಕಿಸಾನ್ ಯೂನಿಯನ್ ಅಧ್ಯಕ್ಷ ಸಿಂಗು ಚದೂರಿ, ‘ಕರ್ನಾಲ್ ಜಿಲ್ಲಾಡಳಿತದ ಜೊತೆ ನಡೆಸಿದ ಸಭೆಯಿಂದ ಯಾವುದೇ ಫಲಿತಾಂಶ ಹೊರಬಿದ್ದಿಲ್ಲ. ಹಾಗಾಗಿ ನಾವು ಕಿಸಾನ್ ಪಂಚಾಯತ್ ನಡೆಸಿಯೇ ತೀರುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಮಧ್ಯೆ ಜಿಲ್ಲಾಡಳಿತ ಕರ್ನಾಲ್ ಕೇಂದ್ರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ. ಸಿಆರ್.ಪಿಸಿ 144 ಸೆಕ್ಷನ್ ಜಾರಿಗೊಳಿಸಿದ್ದು 5 ಜನರಿಗಿಂತ ಮೇಲ್ಪಟ್ಟು ಗುಂಪು ಸೇರಬಾರದು. ಸಂಚಾರಕ್ಕೆ ಅಡಚಣೆ ಉಂಟಾಗುವ ಹಿನ್ನೆಲೆಯಲ್ಲಿ ವಾಹನ ಸಂಚಾರ ಮಾರ್ಗವನ್ನು ಬದಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಮಂಗಳವಾರ ಸಂಚಾರಕ್ಕೆ ಅಡ್ಡಿಯಾಗುವ ಕಾರಣದಿಂದ ನಿಷೇಧಾಜ್ಞೆ ಜಾರಿಗೊಳಿಸಿದೆ ಎಂದು ಹೇಳಿದೆ.


