ರಾಜ್ಯದ ಮೂರು ಮಹಾನಗರ ಪಾಲಿಕೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಬೆಳಗಾವಿ ಪಾಲಿಕೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಬಿಜೆಪಿ ಅತಿಹೆಚ್ಚು ಸದಸ್ಯರನ್ನು ಹೊಂದಿದ್ದರೂ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿ ಮಹಾನಗರ ಪಾಲಿಕೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಸೆಪ್ಟೆಂಬರ್ 6ರಂದು ಪ್ರಕಟವಾಗಿದೆ. ಇಂದು ಬೆಳಗಿನಿಂದಲೇ ಮತ ಎಣಿಕೆ ಕಾರ್ಯ ನಡೆದು ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳು ಬಂದಿವೆ ಎಂಬುದು ಸ್ಪಷ್ಟವಾಗಿದೆ.
58 ಸದಸ್ಯ ಬಲದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ. ಪಕ್ಷಗಳು ಪಡೆದ ಸ್ಥಾನಗಳು ಹೀಗಿವೆ.
ಬಿಜೆಪಿ-35
ಕಾಂಗ್ರೆಸ್ -10
ಪಕ್ಷೇತರರು-13
82 ಸದಸ್ಯ ಬಲದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅತಿಹೆಚ್ಚು ಸ್ಥಾನಗಳನ್ನು ಪಡೆದು ದೊಡ್ಡಪಕ್ಷವಾಗಿ ಹೊರಹೊಮ್ಮಿದೆ.
ಬಿಜೆಪಿ-39
ಕಾಂಗ್ರೆಸ್-33
ಜೆಡಿಎಸ್-01
ಪಕ್ಷೇತರರು-09
ಹಾಗೆಯೇ 55 ಸದಸ್ಯ ಬಲದ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕ ಸ್ಥಾನಗಳನ್ನು ಪಡೆದು ದೊಡ್ಡಪಕ್ಷವಾಗಿ ಹೊರಹೊಮ್ಮಿದೆ. ಆದರೂ ಇಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ತಂತ್ರ ರೂಪಿಸುತ್ತಿದೆ.
ಬಿಜೆಪಿ- 23
ಕಾಂಗ್ರೆಸ್-27
ಜೆಡಿಎಸ್-04
ಪಕ್ಷೇತರ-1
ಕಲಬುರಗಿ ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಮತ್ತು ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ನಡೆಸಿವೆ. ಪಕ್ಷೇತರ ಸದಸ್ಯರು ಮತ್ತು ಜೆಡಿಎಸ್ ಸದಸ್ಯರನ್ನು ತಮ್ಮತ್ತ ಸೆಳೆಯಲು ಉಭಯ ಪಕ್ಷದ ಮುಖಂಡರು ಮಾತುಕತೆ ನಡೆಸುತ್ತಿದ್ದಾರೆ. ಪಕ್ಷೇತರ ಮತ್ತು ಜೆಡಿಎಸ್ ಸದಸ್ಯರು ಬೆಂಬಲಿಸುವ ಪಕ್ಷ ಅಧಿಕಾರ ಹಿಡಿಯುವ ಸಾಧ್ಯತೆ ಹೆಚ್ಚಾಗಿದೆ.