Sunday, December 22, 2024
Google search engine
Homeಮುಖಪುಟಬಿಜೆಪಿಯಿಂದ ಆಡಳಿತ ದುರುಪಯೋಗ-ಸಿದ್ದರಾಮಯ್ಯ

ಬಿಜೆಪಿಯಿಂದ ಆಡಳಿತ ದುರುಪಯೋಗ-ಸಿದ್ದರಾಮಯ್ಯ

ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೆ ಇಂತಹ ಚುನಾವಣೆಯಲ್ಲಿ ಹೆಚ್ಚು ಅನುಕೂಲಗಳಿವೆ. ಹಾಗಾಗಿ ಬಿಜೆಪಿ ಸಂಪನ್ಮೂಲಕ್ಕೆ ನಾವು ಸಾಟಿಯಲ್ಲ. ಅದೇ ರೀತಿ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ದೂರಿದ್ದಾರೆ.

ಫೇಸ್ಬುಕ್ ನಲ್ಲಿ ಬರೆದುಕೊಂಡಿರುವ ಅವರು, ಸೋಲು-ಗೆಲುವುಗಳು ನಿರೀಕ್ಷಿತ, ಹೋರಾಟ ನಿರಂತರವಾಗಿದೆ. ಬಿಜೆಪಿ ಅಧಿಕಾರ ದುರುಪಯೋಗಪಡಿಸಿಕೊಂಡಿರುವುದಕ್ಕೆ ಕಲ್ಬುರ್ಗಿಯಲ್ಲಿ ನಮ್ಮ ಶಾಸಕಿಯ ಸಂಬಂಧಿ ಮೇಲೆ ಹಲ್ಲೆ ನಡೆಸಿರುವುದು ಸಾಕ್ಷಿಯಾಗಿದೆ. ಹೀಗಿದ್ದರೂ ನಮ್ಮ ಸಾಧನೆ ಸಮಾಧಾನಕರವಾಗಿದೆ ಎಂದು ಹೇಳಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆಯ ಫಲಿತಾಂಶ ಅನಿರೀಕ್ಷಿತ. 58 ಸ್ಥಾನಗಳಲ್ಲಿ 9 ಸ್ಥಾನಗಳನ್ನು ಮಾತ್ರ ನಾವು ಗೆದ್ದಿದ್ದೇವೆ. ಬಿಜೆಪಿ ಪಕ್ಷ ಬಹುಮತ ಗಳಿಸಿದೆ. ಇಲ್ಲಿನ ಪಾಲಿಕೆ ವ್ಯಾಪ್ತಿಯಲ್ಲಿ ನಮ್ಮ ಪಕ್ಷದ ಶಾಸಕರು ಹಾಗೂ ಸಂಸದರು ಇಲ್ಲದಿರುವುದು ಕೂಡಾ ನಮ್ಮ ಹಿನ್ನಡೆಗೆ ಕಾರಣ ಎಂದು ಬೆಳಗಾವಿಯಲ್ಲಿ ಪಕ್ಷದ ಹಿನ್ನಡೆಗೆ ಕಾರಣ ತಿಳಿಸಿದ್ದಾರೆ.

ಹುಬ್ಬಳ್ಳಿ ಧಾರವಾಡದಲ್ಲಿ ಬಹುಮತ ಗಳಿಸುವ ನಿರೀಕ್ಷೆಯಿತ್ತು, ಆದರೆ ಅತಂತ್ರ ಫಲಿತಾಂಶ ಬಂದಿದೆ. ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ಹಲವು ಮಂದಿ ಶಾಸಕರ ಹೊರತಾಗಿಯೂ ಬಿಜೆಪಿಯದ್ದು ದೊಡ್ಡ ಗೆಲುವಲ್ಲ, ಕೆಲವೇ ಕ್ಷೇತ್ರಗಳ ಅಂತರದಲ್ಲಿ ನಾವು ಬಹುಮತ ಕಳೆದುಕೊಂಡದ್ದು ಕಡಿಮೆ ಸಾಧನೆಯೂ ಅಲ್ಲ ಎಂದು ಹೇಳಿದ್ದಾರೆ.

ಮಹಾನಗರ ಪಾಲಿಕೆಗಳ ಚುನಾವಣಾ ಫಲಿತಾಂಶ ಜನರ ಒಲವು ಬಿಜೆಪಿ ಪರವಾಗಿರುವುದನ್ನು ತೋರಿಸುತ್ತದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ಅವರ ರಾಜಕೀಯ ಜ್ಞಾನದ ಕೊರತೆ ತೋರಿಸುತ್ತದೆ. ಬೆಳಗಾವಿ ಬಿಟ್ಟರೆ ಬೇರೆಲ್ಲಿ ಬಿಜೆಪಿ ಬಹುಮತ ಪಡೆದಿದೆ? ನಾನು ಚುನಾವಣಾ ಪ್ರಚಾರಕ್ಕೆ ಹೋಗದಿರುವುದು ಚುನಾವಣೆಗೆ ಮೊದಲೇ ಸೋಲೊಪ್ಪಿಕೊಂಡಂತೆ ಎಂಬುದು ಕೂಡ ಬಾಲಿಶ ಹೇಳಿಕೆ. ಅವರ ಮಾತಿನ ಪ್ರಕಾರ ಬಿಜೆಪಿ ಗೆಲುವಿನ ಕಾರಣ ನಾನು ಎಂದಾಗುವುದಿಲ್ಲವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ನಾನು ಈ ಬಾರಿ ಮಾತ್ರವಲ್ಲ ಹಿಂದೆಯೂ ಪಾಲಿಕೆ ಚುನಾವಣೆಯ ಪ್ರಚಾರಕ್ಕೆ ಹೋಗಿಲ್ಲ. ನಳಿನ್ ಕುಮಾರ್ ಕಟೀಲ್ ಬಿಜೆಪಿಯ ರಾಜ್ಯಾಧ್ಯಕ್ಷರಲ್ಲವೇ? ಅವರು ಎಷ್ಟು ಕಡೆ ಪ್ರಚಾರಕ್ಕೆ ಹೋಗಿದ್ದಾರೆ? ಅವರನ್ನು ಅವರ ಪಕ್ಷದಲ್ಲಿ ಕೇಳುವವರಿಲ್ಲ. ನನ್ನನ್ನು ಟೀಕಿಸಿದರೆ ಪ್ರಚಾರ ಸಿಗುತ್ತೆ ಎಂದು ಟೀಕಿಸುತ್ತಾರೆ ಅಷ್ಟೆ ಎಂದು ಕುಟುಕಿದರು.

ತಾಲಿಬಾನಿಗಳಿಂದ ಭಾರತದಲ್ಲಿ ತೈಲ ಬೆಲೆಯೇರಿಕೆ ಆಗುತ್ತಿದೆ ಎಂಬ ಅರವಿಂದ ಬೆಲ್ಲದ್ ಹೇಳಿಕೆ ದಡ್ಡತನದ ಪರಮಾವಧಿ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗದೆ ಇದ್ದಾಗ ದೇಶದೊಳಗೆ ಮಾತ್ರ ತೈಲಬೆಲೆ ಏರಿದರೆ ಅದಕ್ಕೆ ತಾಲಿಬಾನ್ ಹೇಗೆ ಕಾರಣವಾಗುತ್ತೆ? ಎಂದು ಲೇವಡಿ ಮಾಡಿದರು.

ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗೆ ಸಂಬಂಧಿಸಿದ ಮೀಸಲಾತಿ ಆಯೋಗ ರಚನೆಯ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಈಗಲೇ ಚುನಾವಣೆ ನಡೆಸಲು ರಾಜ್ಯ ಸರ್ಕಾರಕ್ಕೆ ಧೈರ್ಯವಿಲ್ಲ. ಸೋಲಿನ ಭಯದಿಂದ ಚುನಾವಣೆ ಮುಂದೂಡಲು ಈ ರೀತಿಯ ನಾಟಕ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷಕ್ಕೆ ಮತ ನೀಡಿದ ಮತದಾರರಿಗೆ ಹಾಗೂ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿದ ಕಾರ್ಯಕರ್ತರಿಗೆ, ಜಯಗಳಿಸಿದ ಸದಸ್ಯರಿಗೂ ಅಭಿನಂದನೆ ಸಲ್ಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular