ಹಬ್ಬ, ಜಾತ್ರೆಗಳಲ್ಲಿ ಹೆಚ್ಚು ಜನರು ಸೇರುವ ಕಡೆ ಹೋಗಬೇಕೆಂದರೆ ಪ್ರತಿಯೊಬ್ಬರೂ ಕಡ್ಡಾಯವಾಗಿ ವಾಕ್ಸಿನ್ ಪಡೆಯಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕೊವಿಡ್ 2ನೇ ಅಲೆ ಇನ್ನೂ ಸಂಪೂರ್ಣವಾಗಿ ಹೋಗಿಲ್ಲ. ಪಾಸಿಟಿವಿಟಿ ದರ ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿ ಮನೆಯಲ್ಲೇ ಹಬ್ಬ ಆಚರಿಸಬೇಕು. ಕೊವಿಡ್ ಹಿನ್ನೆಲೆಯಲ್ಲಿ ವಾಕ್ಸಿನ್ ಪಡೆಯಬೇಕು ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷನ್ ತಿಳಿಸಿದ್ದಾರೆ.
ದೇಶದ 39 ಜಿಲ್ಲೆಗಳಲ್ಲಿ ಆಗಸ್ಟ್ 31ರ ಅಂತ್ಯಕ್ಕೆ ವಾರದಲ್ಲಿ ಶೇಕಡ 10ರಷ್ಟು ಪಾಸಿಟಿವಿಟಿ ದರ ಇರುವುದು ಕಂಡುಬಂದಿದೆ. 38 ಜಿಲ್ಲೆಗಳಲ್ಲಿ ಶೇಕಡ 5 ರಿಂದ 10ರಷ್ಟು ಪಾಸಿಟಿವಿಟಿ ದರ ಇದೆ ಎಂದು ಹೇಳಿದರು.
ದೇಶದಲ್ಲಿ 47,092 ಹೊಸ ಕೊವಿಡ್ ಪ್ರಕರಣಗಳು ದಾಖಲಾಗಿವೆ. ಇದು ಎರಡು ತಿಂಗಳಲ್ಲಿ ದಿನಕ್ಕೆ ಕಂಡುಬಂದಿರುವ ಅತಿಹೆಚ್ಚು ಪ್ರಕರಣಗಳಾಗಿವೆ ಎಂದು ಹೇಳಿದರು.
ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ 1 ಲಕ್ಷ ಹೊಸ ಕೊವಿಡ್ ಆಕ್ಟೀವ್ ಪ್ರಕರಣಗಳು ಇವೆ. ಈ 4 ರಾಜ್ಯಗಳಲ್ಲಿ 10,000 ರಿಂದ 1 ಲಕ್ಷದವರೆಗೆ ಆಕ್ಟೀವ್ ಪ್ರಕರಣಗಳು, ಇತರೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 10 ಸಾವಿರ ಕೋವಿಡ್ ಪ್ರಕರಣಗಳು ಎಂದು ತಿಳಿಸಿದರು.
ದೇಶದಲ್ಲಿ ಶೇ.16ರಷ್ಟು ಯುವಜನರು ಎರಡು ಡೋಸ್ ಗಳನ್ನು ಪಡೆದಿದ್ದರೆ, ಶೇ.54ರಷ್ಟು ಮಂದಿ ಮೊದಲ ಡೋಸ್ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಸಿಕ್ಕಿಂ, ದಾದ್ರ, ನಗರ್ ಹಾವೇಲಿ, ಹಿಮಾಚಲಪ್ರದೇಶದಲ್ಲಿ ಶೇ.100ರಷ್ಟು ಯುವಸಮುದಾಯ ಮೊದಲ ಡೋಸ್ ಪಡೆದುಕೊಂಡಿದೆ. ದೇಶದಲ್ಲಿ 300 ಡೆಲ್ಟಾ ಪ್ಲಸ್ ಸಿವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್-2 ಪ್ರಕರಣಗಳು ಪತ್ತೆಯಾಗಿವೆ ಎಂದು ರಾಜೇಶ್ ಭೂಷಣ್ ತಿಳಿಸಿದರು.


