ದುನಿಯಾ ವಿಜಯ್ ಅವರ ಲ್ಯಾಂಡ್ ಲಾರ್ಡ್ ಸಿನಿಮಾ ಸಮಾಜದಲ್ಲಿರುವ ಅಸಮಾನತೆಯನ್ನು ತೊಲಗಿಸಲು ಸಂವಿಧಾನದ ಸಮಾನತೆಯನ್ನು, ಈ ದೇಶದ ಸಂಸ್ಕೃತಿಯನ್ನು ವಾಸ್ತವತೆಯನ್ನು ಎತ್ತಿ ಹಿಡಿದಿರುವುದರಿಂದ ಯುವಕರು ಜಾತ್ಯತೀತವಾಗಿ ಈ ಸಿನಿಮಾವನ್ನು ನೋಡಬೇಕೆಂದು ಜಾತ್ಯತೀತ ಯುವ ವೇದಿಕೆಯ ಕಾರ್ಯಾಧ್ಯಕ್ಷ ವಿರೂಪಾಕ್ಷ ಡ್ಯಾಗೇರಹಳ್ಳಿ ತಿಳಿಸಿದರು.
ಜನವರಿ 28ರ ಸಂಜೆ ತುಮಕೂರಿನ ಎಸ್.ಮಾಲ್‌ನಲ್ಲಿ ವಿವಿಧ ಸಂಘಟನೆಗಳು ಲ್ಯಾಂಡ್ ಲಾರ್ಡ್ ಸಿನಿಮಾ ವೀಕ್ಷಣೆಯ ಮೂಲಕ ಬೆಂಬಲ ಸೂಚಿಸಿದ ಸಂದರ್ಭದಲ್ಲಿ ಮಾತನಾಡಿ, ಈ ಸಿನಿಮಾವನ್ನು ಜಾತ್ಯತೀತವಾಗಿ ಯುವಜನರು ಪ್ರೋತ್ಸಾಹಿಸಬೇಕೆಂದು ಮಾನವಿ ಮಾಡಿದರು.
ದುನಿಯಾ ವಿಜಯ್ ಈ ಸಿನಿಮಾವನ್ನು ಸವಾಲಾಗಿ ಸ್ವೀಕರಿಸಿ, ಈ ಹಿಂದೆ ನಡೆದಿರುವ ಭಾರತದ ವಾಸ್ತವವನ್ನು ಈ ಚಿತ್ರದಲ್ಲಿ ಎತ್ತಿ ಹಿಡಿಯಲಾಗಿದೆ, ಈ ದೇಶದ ಸಂವಿಧಾನ ಅಸಮಾನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಿನಿಮಾ ಮೂಲಕ ತೋರಿಸಲಾಗಿದೆ ಜನಪರ ಮನಸ್ಸುಗಳು ಈ ಸಿನಿಮಾವನ್ನು ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.
ಡಾ.ದರ್ಶನ್ ಮಾತನಾಡಿ ಭಾರತದ ಇತಿಹಾಸದ ಬಗ್ಗೆ, ಅಸಮಾನತೆಯ ಬಗ್ಗೆ ಬೆಳಕನ್ನು ಚೆಲ್ಲಲಾಗಿದೆ, ಹೀಗಾಗಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಿನಿಮಾ ನೋಡುವ ಮೂಲಕ ಭಾರತದ ಇತಿಹಾಸವನ್ನು ತಿಳಿಯಬೇಕೆಂದು ತಿಳಿಸಿದರು.
ಕೆಪಿಸಿಸಿ ಕೋ-ಆರ್ಡಿನೇಟರ್ ಕೆ.ಎಸ್.ಗುರುಪ್ರಸಾದ್ ಮಾತನಾಡಿ, ಈ ತರಹ ಸಾಮಾಜಿಕ ಚಿತ್ರಗಳು ರಾಜಕುಮಾರ್, ವಿಷ್ಣುವರ್ಧನ್ ಕಾಲದಲ್ಲಿ ಜಮೀನ್ದಾರಿ ಪದ್ದತಿಯ ಸಾಮಾಜಿಕ ಶೋಷಣೆಯ ಚಿತ್ರಗಳು ಬರುತ್ತಿದ್ದವು, ಇತ್ತೀಚಿನ ದಿನಗಳಲ್ಲಿ ಅಂತಹ ಚಿತ್ರಗಳು ಕಣ್ಮರೆಯಾಗಿದ್ದವು, ಈಗ ದುನಿಯಾ ವಿಜಯ್ ಅವರು ಲ್ಯಾಂಡ್ ಲಾರ್ಡ್ ಮೂಲಕ ಒಂದು ಹೆಣ್ಣು ವಿದ್ಯೆ ಕಲಿತರೆ, ಸಂವಿಧಾನ ಜಾರಿಯಿಂದ ಆಗಿರುವ ಸಮಾಜದ ಬದಲಾವಣೆಯನ್ನು ತೋರಿಸಲಾಗಿದೆ ಎಂದರು.
ವಿಮರ್ಶಕ ಡಾ. ರವಿಕುಮಾರ್ ನೀಹ ಮಾತನಾಡಿ, ಸಿನಿಮಾ ಎಂಬುದೇ ಒಂದು ಪ್ರಬಲ ಮಾಧ್ಯಮ, ಪ್ರಬಲ ಮಾಧ್ಯಮ ಸಾಮಾಜಿಕ ಕಾಳಜಿಯನ್ನಿಟ್ಟುಕೊಂಡು ಈ ಕಾಲದಲ್ಲಿ ಇಂತಹ ಸಿನಿಮಾ ಬಂದಿರುವುದು ಬಹಳ ಮುಖ್ಯವಾದದ್ದು, ಏಕೆಂದರೆ ಶತ ಶತಮಾನಗಳಿಂದ ತುಳಿತಕ್ಕೊಳಗಾದವರಿದ್ದಾರೆ, ದೇವದಾಸಿ ಪದ್ದತಿಯಿಂದ ನರಳಿರುವವರಿದ್ದಾರೆ, ಇದಕ್ಕೆಲ್ಲಾ ಸ್ವಾಭಿಮಾನ ತಂದುಕೊಟ್ಟವರು ಬಾಬಾ ಸಾಹೇಬ ಅಂಬೇಡ್ಕರ್ ಎಂದು ಹೇಳಿದರು.
ದಲಿತ ಹೋರಾಟಗಾರ ಕುಂದೂರು ಮುರಳಿ, ವಿವಿಧ ಸಂಘಟನೆಯ 200ಕ್ಕೂ ಹೆಚ್ಚು ಜನ ಲ್ಯಾಂಡ್ ಲಾರ್ಡ್ ಸಿನಿಮಾ ವೀಕ್ಷಿಸಿದರು.


