ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯ ಆಯೋಜಿಸಿರುವ ಸಾಹಿತ್ಯ ಸಹವಾಸ ಸಮಕಾಲೀನ ಸಂವೇದನೆ ಕುರಿತಂತೆ ಹಿರಿಯ ಸಾಹಿತಿಗಳಾದ ನಾಡೋಜ ಬರಗೂರು ರಾಮಚಂದ್ರಪ್ಪ ಮತ್ತು ಲಲಿತಾ ಸಿದ್ದಬಸವಯ್ಯ ಅವರ ಕೊಡುಗೆಗಳನ್ನು ಕುರಿತ ಸಾಹಿತ್ಯಕ ಕಾರ್ಯಕ್ರಮವನ್ನು ಫೆ.1ರಂದು ಬೆಳಗ್ಗೆ 10.30ರಿಂದ ಸಂಜೆ 5.30ರವರೆಗೂ ತುಮಕೂರಿನ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ.
ಅಜೀಂ ಪ್ರೇಮ್ ಜಿ ಫೌಂಡೇಶನ್ ಮುಖ್ಯ ಸಂವಹನಾಧಿಕಾರಿ ಸುಧೀಶ್ ಬೆಂಕಟೇಶ್ ಪ್ರಾಸ್ತಾವಿಕ ಮಾತನಾಡುವರು. ವಿಮರ್ಶಕ ಡಾ.ಎಚ್.ಎಸ್.ರಾಘವೇಂದ್ರ ರಾವ್ ಕಾರ್ಯಕ್ರಮ ಉದ್ಘಾಟಿಸಿ ಆಶಯ ನುಡಿಗಳನ್ನಾಡುವರು.
ಬರಗೂರರ ಸಾಹಿತ್ಯ, ಹೋರಾಟ ಮತ್ತು ಸಿನಿಮಾ ವಿಷಯದ ಕುರಿತು ಬೆಳಗ್ಗೆ 11.20 ರಿಂದ 12.25ರವರೆಗೆ ಮೊದಲ ಗೋಷ್ಠಿ ನಡೆಯಲಿದ್ದು ಬರಗೂರರ ಸಾಹಿತ್ಯದಲ್ಲಿ ಪ್ರಧಾನ ಆಶಯ ಮತ್ತು ಅದರ ಅಭಿವ್ಯಕ್ತಿಯ ಸ್ವರೂಪದ ಕುರಿತು ತುಮಕೂರು ವಿವಿ ಕಲಾ ಕಾಲೇಜಿನ ಅಧ್ಯಾಪಕಿ ಡಾ.ಆಶಾ ಬಗ್ಗನಡು ವಿಷಯ ಮಂಡಿಸುವರು. ಬರಗೂರರ ಬದುಕು ಹೋರಾಟದ ಹೆಜ್ಜೆ ಗುರುತು ವಿಷಯದ ಕುರಿತು ಸಾಹಿತಿ ಆರ್.ಜಿ.ಹಳ್ಳಿ ನಾಗರಾಜ್ ಮಾತನಾಡುವರು. ಸಾಹಿತಿ ಡಾ.ರಾಜಪ್ಪ ದಳವಾಯಿ ಅವರು ಅಧ್ಯಕ್ಷರ ನುಡಿ ಮತ್ತು ಬರಗೂರರ ಸಿನಿಮಾಗಳಲ್ಲಿ ಪ್ರತಿರೋಧದ ನೆಲೆಗಳು ಕುರಿತು ಮಾತನಾಡುವರು.
ಮಧ್ಯಾಹ್ನ 12.25 ರಿಂದ 1 ಗಂಟೆಯವರೆಗೆ ಸಾಹಿತಿಗಳ ಛಾಯಾಚಿತ್ರಗಳ ಪ್ರದರ್ಶನ ವೀಕ್ಷಣೆ ಇರಲಿದೆ. ಮಧ್ಯಾಹ್ನ 2 ರಿಂದ 3 ಗಂಟೆಯವರೆಗೆ ಕವಿಗೋಷ್ಠಿ ನಡೆಯಲಿದ್ದು, ಲೇಖಕಿ ಬಾ.ಹ.ರಮಾಕುಮಾರಿ ಆಶಯ ನುಡಿಗಳನ್ನಾಡುವರು. ಸಹಾಯಕ ಪ್ರಾಧ್ಯಾಪಕಿ ಡಾ.ಗೀತಾ ವಸಂತ್ ಅಧ್ಯಕ್ಷತೆ ವಹಿಸುವರು.
ಮಧ್ಯಾಹ್ನ 3 ರಿಂದ 4 ಗಂಟೆಯವರೆಗೆ ಎರಡನೇ ಗೋಷ್ಠಿ ನಡೆಯಲಿದ್ದು, ಲೇಖಕಿ ಲಲಿತಾ ಸಿದ್ದಬಸವಯ್ಯ ಅವರ ಸಾಹಿತ್ಯ ಮತ್ತು ಜೀವನ ದೃಷ್ಟಿಕೋನ: ಕುರಿತು ಸಂವಾದ ನಡೆಯಲಿದೆ. ಲೇಖಕ ಚ.ಹ.ರಘುನಾಥ್, ಬೆಳ್ಳಾವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥೆ ದಿವ್ಯಶ್ರೀ ಬಿ.ಎನ್. ಸಂವಾದದಲ್ಲಿ ಪಾಲ್ಗೊಳ್ಳುವರು.
ಅಪರಾಹ್ನ 4.20 ರಿಂದ 4.50ವರವರೆ ಡಾ.ಲಕ್ಷ್ಮಣದಾಸ್ ಮತ್ತು ಸಂಗಡಿಗರಿಂದ ನಾಟಕರತ್ನ ಗುಬ್ಬಿ ವೀರಣ್ಣ ಗೌರವಾರ್ಥ ರಂಗಗೀತೆಗಳ ಗಾಯನ ನಡೆಯಲಿದೆ. ಅಪರಾಹ್ನ 4.50 ರಿಂದ 5.30ರವರೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಲೇಖಕಿ ಲಿಲತಾ ಸಿದ್ದಬಸವಯ್ಯ, ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ವಿವಿ ವಿಜ್ಞಾನ ಕಾಲೇಜು ಪ್ರಾಂಶುಪಾಲ ಎಸ್.ಶ್ರೀನಿವಾಸ್, ಅಜೀಂ ಪ್ರೇಮ್ ಜಿ ವಿವಿ ಸಹನಿರ್ದೇಶಕ ಎಸ್.ವಿ.ಮಂಜುನಾಥ್ ಭಾಗವಹಿಸುವರು.


