“ಜೆಡಿಎಸ್ ಮುಳುಗುತ್ತಿರುವ ಹಡಗು” ಎಂಬ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆ ವಿರುದ್ಧ ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಅವರು ರಾಜ್ಯಕ್ಕೆ ವಸೂಲಿ ಮಾಡಿಕೊಂಡು ಹೋಗಲು ಬರುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಆಗಾಗ ರಾಜ್ಯಕ್ಕೆ ಬಂದು ಹೋಗುವ ಅರುಣ್ ಸಿಂಗ್ ಅವರಿಗೆ ರಾಜ್ಯದ ವಾಸ್ತವ ಸ್ಥಿತಿ ಗೊತ್ತಿಲ್ಲ. ಪಾಪ ಅರುಣ್ ಸಿಂಗ್ ಅವರಿಗೆ ಏನು ಗೊತ್ತು. ಬಂದು ವಸೂಲಿ ಮಾಡಿಕೊಂಡು ಹೋಗುತ್ತಾರೆ ಅಷ್ಟೇ” ಎಂದು ಟೀಕಿಸಿದ್ದಾರೆ.
ಮೈಸೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೇಯರ್ ಹುದ್ದೆ ಹಿಡಿಯುವ ಸಂಬಂಧ ಸಾ.ರ.ಮಹೇಶ್ ಅವರ ಮನೆಗೆ ಬಂದವರು ಯಾರು? ಮಧ್ಯರಾತ್ರಿಯಲ್ಲಿ ಬಂದು ಸಾ.ರ.ಮಹೇಶ್ ಜೊತೆ ಮಾತನಾಡಿದವರು ಯಾರು? ಜೆಡಿಎಸ್ ಮುಖಂಡರು ಯಾರ ಮನೆ ಬಾಗಿಲಿಗೂ ಹೋಗಿಲ್ಲ ಎಂದು ಹೇಳಿದರು.
ಜೆಡಿಎಸ್ ಮುಳುಗುತ್ತಿರುವ ಅಡಗು ಅನ್ನುವುದಾದರೆ ಸಾ.ರ.ಮಹೇಶ್ ಮನೆಗೇಕೆ ಬಂದರು. ಜೆಡಿಎಸ್ ಪ್ಯೂಸ್ ಅನ್ನು ತೆಗೆಯಲು ಯಾರಿಂದಲೂ ಸಾಧ್ಯವಿಲ್ಲ. ಯಾರಿಂದಲೂ ನಮಗೆ ಶಾಕ್ ಕೊಡಲೂ ಆಗುವುದಿಲ್ಲ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಡಬ್ಬದಲ್ಲಿ ಏನೂ ಇಲ್ಲದಿದ್ದರೂ ಬಿಜೆಪಿ ಸದ್ದು ಮಾಡುತ್ತದೆ. ಈ ವಿಷಯದ ಬಗ್ಗೆ ತಲೆ ಕಡೆಸಿಕೊಳ್ಳುವುದಿಲ್ಲ ಎಂದರು.
ಹೋಗುವವರು, ಬರುವವರಿಗೆ ಬಾಗಿಲು ತೆರೆದಿದೆ:
ಜಾತ್ಯತೀತ ಜನತಾ ದಳದ ಬಾಗಿಲು ದೊಡ್ಡದಾಗಿದೆ. ಯಾರು ಬೇಕಾದರೂ ಬರಬಹುದು. ಯಾರು ಬೇಕಾದರೂ ಹೋಗಬಹುದು. ಬರುವವರು ಬರುತ್ತಾರೆ. ಹೋಗುವವರು ಹೋಗುತ್ತಾರೆ ಎಂದು ಶಾಸಕ ಜಿ.ಟಿ.ದೇವೇಗೌಡ ಅವರು ಪಕ್ಷ ತೊರೆದಿರುವ ಬಗ್ಗೆ ವಿವರಿಸಿದರು.
ಜಿ.ಟಿ.ದೇವೇಗೌಡ ಅವರೇ ನಾನು ಪಕ್ಷದಿಂದ ದೂರ ಇದ್ದೇನೆ ಎಂದು ಹೇಳಿದ್ದಾರೆ. ನಾವು ಪಕ್ಷದಿಂದ ಹೊರಹೋಗಿ ಎಂದು ಯಾರಿಗೂ ಹೇಳಿಲ್ಲ ಎಂದು ತಿಳಿಸಿದರು.