ಕೇಂದ್ರ ಸರ್ಕಾರ ಸೆಪ್ಟೆಂಬರ್ 1ರಂದು ಅಡುಗೆ ಅನಿಲ ದರವನ್ನು ಪ್ರತಿ ಸಿಲೆಂಡರ್ ಗೆ 25 ರೂಪಾಯಿ ಹೆಚ್ಚಳ ಮಾಡಿದೆ. 14.2 ಕೆ.ಜಿ. ತೂಕದ ಅಡುಗೆ ಅನಿಲ ಸಿಲಿಂಡರ್ ದರ ಬೆಂಗಳೂರಿನಲ್ಲಿ 910 ರೂಪಾಯಿಗೆ ಏರಿಕೆಯಾಗಿದೆ.
ಒಂದು ತಿಂಗಳಲ್ಲಿ ಅಡುಗೆ ಅನಿಲ ದರ ಏರಿಕೆಯಾಗುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಆಗಸ್ಟ್ 18ರಂದು ಅನಿಲ ಕಂಪನಿಗಳು 25 ರೂ ಹೆಚ್ಚಳ ಮಾಡಿದ್ದವು. ಈಗ ಸರ್ಕಾರ ಅಡುಗೆ ಅನಿಲ ಸಿಲೆಂಡರ್ ದರವನ್ನು 25 ರೂಗೆ ಹೆಚ್ಚಳ ಮಾಡಿದ್ದು, ಜನರು ತೊಂದರೆ ಅನುಭವಿಸುವಂತೆ ಆಗಿದೆ.
ದೆಹಲಿಯಲ್ಲಿ ಪ್ರತಿ ಸಿಲೆಂಡರ್ ದರ 884.50 ರೂಪಾಯಿಗೆ ಏರಿಕೆಯಾಗಿದೆ. ಚನ್ನೈನಲ್ಲಿ 911 ರೂಪಾಯಿಗೆ ಏರಿಕೆಯಾಗಿದೆ. ಜತೆಗೆ ವಾಣಿಜ್ಯ ಸಿಲೆಂಡರ್ ದರ 19 ರೂ ಹೆಚ್ಚಿಸಿದ್ದು ಈ ಮೂಲಕ 1693 ರೂಪಾಯಿಗೆ ಏರಿಕೆಗೊಂಡಿದೆ.
ಅಡುಗೆ ಅನಿಲ ದರವನ್ನು ಹೆಚ್ಚಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಕಾಂಗ್ರೆಸ್ ನಾಯಕ ಖಂಡಿಸಿದ್ದಾರೆ. ಪದೇ ಪದೇ ಬೆಲೆ ಏರಿಕೆಯಿಂದ ಜನರು ಸಮಸ್ಯೆ ಎದುರಿಸುವಂತೆ ಆಗಿದೆ. “ಜನರನ್ನು ಖಾಲಿ ಹೊಟ್ಟೆಯಲ್ಲಿ ಮಲಗುವಂತೆ ಮಾಡಿ, ತಾವು ಮಾತ್ರ ಸ್ನೇಹಿತರ ನೆರಳಲ್ಲಿ ಮಲಗುತ್ತಿದ್ದೀರಿ” ಎಂದು ಟೀಕಿಸಿದ್ದಾರೆ.
“ಜನರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ದೇಶದ ಜನರು ಒಗ್ಗಟ್ಟಿನಿಂದ ಹೋರಾಡಲಿದ್ದಾರೆ. ಪೆಟ್ರೋಲ್, ಡಿಸೆಲ್ ಮತ್ತು ಎಲ್.ಪಿ.ಜಿ ಮೇಲೆ ವಿಧಿಸಿರುವ ತೆರಿಗೆಯನ್ನು ಕಡಿತಗೊಳಿಸುವಂತೆ ರಾಹುಲ್ ಆಗ್ರಹಿಸಿದ್ದಾರೆ.