ಪಶ್ಚಿಮಬಂಗಾಳದಲ್ಲಿ ಬಿಜೆಪಿ ತೊರೆದು ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವ ಶಾಸಕರ ಸಂಖ್ಯೆ ಏರುತ್ತಲೇ ಹೋಗುತ್ತಿದೆ. ಇಂದು ಶಾಸಕ ಬಿಸ್ವಜಿತ್ ದಾಸ್ ಬಿಜೆಪಿ ತೊರೆದು ಟಿಎಂಸಿ ಸೇರ್ಪಡೆಯಾಗಿದ್ದು ಈವರೆಗೆ ಮೂವರು ಶಾಸಕರು ಟಿಎಂಸಿಗೆ ಸೇರ್ಪಡೆಯಾದಂತೆ ಆಗಿದೆ.
2019ರಲ್ಲಿ ಟಿಎಂಸಿ ತೊರೆದು ಬಿಜೆಪಿ ಸೇರಿ ಕಳೆದ ಚುನಾವಣೆಯಲ್ಲಿ ಶಾಸಕರಾಗಿದ್ದ ಬಿಸ್ವಜಿತ್ ದಾಸ್ ಟಿಎಂಸಿ ಮುಖಂಡರ ಸಮ್ಮುಖದಲ್ಲಿಂದು ಪಕ್ಷಕ್ಕೆ ಸೇರ್ಪಡೆಯಾದರು. ಇವರ ಜೊತೆಗೆ ಕೌನ್ಸಿಲರ್ ಮನೋಲೋಷ್ ನಾಥ್ ಟಿಎಂಸಿ ಸೇರಿದ್ದಾರೆ.
ಬಿಸ್ವಜಿತ್ ದಾಸ್ ಮಾತನಾಡಿ ಕೆಲವೊಂದು ಗೊಂದಲಗಳಿಂದ ಟಿಎಂಸಿ ತೊರೆಯಬೇಕಾಯಿತು. ಈಗ ಮತ್ತೆ ನನ್ನ ಮನೆಗೆ ವಾಪಸ್ಸಾಗಿದ್ದೇನೆ. ನಾನು ನನ್ನ ಕ್ಷೇತ್ರ ಮತ್ತು ರಾಜ್ಯದ ಜನರಿಗಾಗಿ ಕೆಲಸ ಮಾಡುತ್ತೇನೆ. ನಾನೆಂದೂ ಬಿಜೆಪಿಯಲ್ಲಿ ನೆಮ್ಮದಿಯಾಗಿ ಇರಲಿಲ್ಲ. ಬಹುದಿನಗಳ ಹಿಂದೆಯೇ ಟಿಎಂಸಿ ಸೇರಬೇಕೆಂದು ಬಯಸಿದ್ದೆ. ಈಗ ಮರಳಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಬಂಗಾಳದಲ್ಲಿ ಏನನ್ನೂ ಮಾಡಿಲ್ಲ. ಹಾಗಾಗಿ ಟಿಎಂಸಿ ಸೇರ್ಪಡೆಯಾಗಿದ್ದೇನೆ ಎಂದರು. ಸೋಮವಾರ ಬಿಷ್ಣುಪುರ ಶಾಸಕ ತನ್ಮಯ ಘೋಷ್ ತೃಣಮೂಲ ಕಾಂಗ್ರೆಸ ಪಕ್ಷವನ್ನು ಸೇರಿದ್ದರು.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ತನ್ಮಯ್ ಬಂಗಾಳದಲ್ಲಿ ಎಲ್ಲರೂ ಟಿಎಂಸಿಗೆ ಬರಬೇಕು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕೈ ಬಲಪಡಿಸಬೇಕು ಎಂದು ಸಲಹೆ ನೀಡಿದ್ದಾರೆ.