ಉತ್ತರಪ್ರದೇಶದ ನೋಯಿಡಾ ನಗರದಲ್ಲಿ ನಿಯಮ-ನಿಬಂಧನೆಗಳನ್ನು ಉಲ್ಲಂಘಿಸಿ ಕಾನೂನುಬಾಹಿರವಾಗಿ ನಿರ್ಮಿಸಿರುವ ಅವಳಿ ಬಹುಮಹಡಿ ಕಟ್ಟಡಗಳನ್ನು ಮೂರು ತಿಂಗಗಳೊಳಗೆ ಸೂಪರ್ ಟೆಕ್ ಕಂಪನಿಯೇ ತನ್ನ ಸ್ವಂತ ಖರ್ಚಿನಲ್ಲಿ ನೆಲಸಮಗೊಳಿಸುವಂತೆ ಸುಪ್ರೀಂಕೋರ್ಟ್ ವಿಭಾಗೀಯ ಪೀಠ ಆದೇಶಿಸಿದೆ.
ಸೂಪರ್ ಟೆಕ್ ರಿಯಲ್ ಎಸ್ಟೇಟ್ ಕಂಪನಿ ವಸತಿ ಯೋಜನೆಯಡಿ ನೋಯಿಡಾ ಪ್ರಾಧಿಕಾರದ ನಿಯಮಗಳನ್ನು ಉಲ್ಲಂಘಿಸಿ 40 ಅಂತಸ್ತಿನ ಅವಳಿ ಟವರ್ ಗಳನ್ನು ನಿರ್ಮಾಣ ಮಾಡಿತ್ತು. ವಸತಿ ಸಮುಚ್ಚಯವನ್ನು ಒಳಸಂಚು ಮತ್ತು ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಿರುವುದನ್ನು ಸುಪ್ರೀಂಕೋರ್ಟ್ ಬೆಟ್ಟು ಮಾಡಿ ತೋರಿಸಿದೆ.
ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಎಂ.ಆರ್. ಶಾ ಅವರಿದ್ದ ವಿಭಾಗೀಯ ಪೀಠ ನೋಯಿಡಾ ಅವಳಿ ಸಮುಚ್ಚಯದಲ್ಲಿ ನಿರ್ಮಿಸಿರುವ 1 ಸಾವಿರ ಪ್ಲಾಟ್ ಗಳು ಕಾನೂನುಬಾಹಿರವಾಗಿ ನಿರ್ಮಿಸಲಾಗಿದೆ. ಅವುಗಳನ್ನು ನೆಲಸಮಗೊಳಿಸಬೇಕು. ರಿಯಲ್ ಎಸ್ಟೇಟ್ ಕಂಪನಿ ಅವಳಿ ಟವರ್ ನಲ್ಲಿ ಮನೆ ಖರೀದಿಸಿರುವ ಎಲ್ಲರಿಗೂ ಹಣ ಮರುಪಾವತಿ ಮಾಡಬೇಕು ಎಂದು ಕೋರ್ಟ್ ಹೇಳಿದೆ.
ಎರಡು ಟವರ್ ನಲ್ಲಿರುವ 1000 ಪ್ಲಾಟ್ ಗಳನ್ನು ಕಾನೂನುಬಾಹಿರವಾಗಿ ನಿರ್ಮಿಸಿದ್ದು ಅವುಗಳನ್ನು ನೆಲಸಮಗೊಳಿಸುವಂತೆ ಅಲಹಾಬಾದ್ ಹೈಕೋರ್ಟ್ 2017ರಲ್ಲಿ ಆದೇಶಿಸಿತ್ತು. ಜೊತೆಗೆ ಮನೆ ಖರೀದಿದಾರರಿಗೆ ಹಣವನ್ನು ಮರುಪಾವತಿ ಮಾಡುವಂತೆ ಆದೇಶಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ಸೂಪರ್ ಟೆಕ್ ರಿಯಲ್ ಎಸ್ಟೇಟ್ ಕಂಪನಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ಆಗ ಸುಪ್ರೀಂ ಕೋರ್ಟ್ ಕಟ್ಟಡ ನೆಲಸಮಗೊಳಿಸುವ ಆದೇಶಕ್ಕೆ ತಡೆ ನೀಡಿತ್ತು. ಕಂಪನಿ ಮನೆ ಮಾಲಿಕರಿಗೆ ಹಣ ಮರುಪಾವತಿಸುವಂತೆ ತಿಳಿಸಿತ್ತು.
ನೋಯಿಡಾ ಪ್ರಾಧಿಕಾರ, ಸೂಪರ್ ಟೆಕ್ ರಿಯಲ್ ಎಸ್ಟೇಟ್ ಕಂಪನಿ ಅವಳಿ ಟವರ್ ಗಳನ್ನು ನಿಯಮಗಳನ್ನು ಅನುಸರಿಸಿ ಕಟ್ಟಿಲ್ಲ. ಇದು ಕಾನೂನುಬಾಹಿರ ಟವರ್ ಎಂದು ಕಂಪನಿಯ ಮೇಲ್ಮನವಿಯನ್ನು ಪ್ರಶ್ನಿಸಿತ್ತು.
ಇದೇ ವೇಳೆ ಸ್ಥಳೀಯ ನಿವಾಸಿಗಳ ಕಲ್ಯಾಣ ಸಮಿತಿ ಕಾನೂನುಬಾಹಿರವಾಗಿ ನಿರ್ಮಿಸಿರುವ ಪ್ಲಾಟ್ ಗಳನ್ನು ತೆರವುಗೊಳಿಸುವಂತೆ ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿದ ಅರ್ಜಿಯನ್ನು ಸ್ವೀಕರಿಸಿತು. ನೋಯಿಡ ಪ್ರಾಧಿಕಾರ ಮತ್ತು ಬಿಲ್ಡರ್ ಗಳು ಸಲ್ಲಿಸಿದ ಅರ್ಜಿಗಳನ್ನು ವಜಾ ಮಾಡಿತು.
ಇದೇ ವೇಳೆ ಒಳಸಂಚು ಮತ್ತು ಕಾನೂನುಬಾಹಿರವಾಗಿ ಅವಳಿ ಟವರ್ ನಿರ್ಮಾಣಕ್ಕೆ ಅವಕಾಶ ನೀಡಿದ ನೋಯಿಡಾ ಪ್ರಾಧಿಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತು.