ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಾರೊಂದು ರಸ್ತೆ ವಿಭಜಕ ಮತ್ತು ಗೋಡೆಗೆ ಡಿಕ್ಕಿ ಹೊಡೆದು ಡಿಎಂಕೆ ಶಾಸಕರ ಪುತ್ರ ಸೇರಿ 7 ಮಂದಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಘಟನೆಯಲ್ಲಿ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ.
ದುರಂತದಲ್ಲಿ ಕಾರನ್ನು ಚಾಲನೆ ಮಾಡುತ್ತಿದ್ದ ಡಿಎಂಕೆ ಶಾಸಕ ಪ್ರಕಾಶ್ ಅವರ ಪುತ್ರ ಕರುಣಸಾಗರ್, ಸಂಬಂಧಿ ಬಿಂಧು, ಸ್ನೇಹಿತರಾದ ಇಶಿತ, ಧನುಷ, ಅಕ್ಷಯ್, ಗೋಯಲ್ ಮತ್ತು ರೋಹಿತ್ ಮರಣ ಹೊಂದಿದ್ದಾರೆ. ಸ್ಥಳದಲ್ಲಿಯೇ 6 ಮಂದಿ ಸಾವನ್ನಪ್ಪಿದರೆ, ಓರ್ವ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರು ರಸ್ತೆ ಡಿವೈಡರ್ ಮತ್ತು ಪಕ್ಕದ ಗೋಡೆಗೆ ಗುದ್ದಿದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಹಾಳಾಗಿದೆ. 100 ಕಿಲೋ ಮೀಟರ್ ವೇಗದಲ್ಲಿ ಕಾರು ಚಲಿಸುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ನಂತರ ಮೃತ ದೇಹಗಳನ್ನು ಸಂಬಂಧಿಕರಿಗೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಜಾನೆ 5.30ರಲ್ಲಿ ಕಾರು ಹೊಸೂರಿಗೆ ಹೋಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಪ್ರಕರಣ ದಾಖಲಿಸಿದ್ದಾರೆ.
ಸ್ಥಳಕ್ಕೆ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ರಾಮಲಿಂಗಾರೆಡ್ಡಿ ಭೇಟಿ ನೀಡಿದ್ದರು. ಡಿಎಂಕೆ ಎಂಎಲ್ಎ ಪ್ರಕಾಶ್ ಅವರ ಪತ್ನಿ ಬಿಟಿಎಂ ಲೇಔಟ್ ನಲ್ಲಿ ವಾಸಿಸುತ್ತಿದ್ದರು. ಕಳೆದ ಕೆಲ ತಿಂಗಳ ಹಿಂದೆ ಪತ್ನಿಯನ್ನು ಕಳೆದುಕೊಂಡಿದ್ದರು.


