ಕೆಳ ಜಾತಿಯ ವ್ಯಕ್ತಿಯನ್ನು ಮದುವೆಯಾದಳು ಎಂಬ ಕಾರಣಕ್ಕೆ ತಂದೆಯೇ ಗರ್ಭಿಣಿ ಮಗಳನ್ನು ಕೊಲ್ಲುವಾಗ, ಭಾರತದ ಸಂಸ್ಕೃತಿ, ಪರಂಪರೆ ಎಷ್ಟು ಎತ್ತರಕ್ಕೆ ಬೆಳೆದು ಏನು ಪ್ರಯೋಜನ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಪ್ರಶ್ನಿಸಿದರು.
ಭಾರತೀಯ ಸಂಸ್ಕೃತಿ, ಪರಂಪರೆಯ ಹೆಸರಿನಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿ ಅನುಭವಿಸುವ ನೋವು, ಸಂಕಟಗಳ ಬಗ್ಗೆ ಮಾತನಾಡದಿರುವುದು ಯಾವ ಭಾರತೀಯತೆ. ಇದೇನಾ ನಿಮ್ಮ ಸಹೋದರ, ಸಹೋದರಿಯನ್ನು ನಡೆಸಿಕೊಳ್ಳುವ ರೀತಿ ಎಂದು ತುಮಕೂರು ಜಿಲ್ಲಾಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದರು.
ತುಮಕೂರಿನ ಶ್ರೀದೇವಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಆಯೋಜಿಸಿದ್ದ “ತಲ್ಲಣಸದಿರು ಮನವೇ” ಸಂಸ್ಕೃತಿ ಚಿಂತನ ಚಾರಣ ಕಾರ್ಯಕ್ರಮ ಉದ್ಘಾಟಿಸಿ ಉದ್ಯೋಗ ಸಿರಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ದೇಶದ ಸ್ವಾತಂತ್ರ, ಸಮಾನತೆಗಾಗಿ ಹೋರಾಟ ಮಾಡಿದ ಗಾಂಧೀಜಿಯ ಹೆಸರನ್ನು ಹೇಳಲು ಹಿಂಜರಿಯುವ ಮಟ್ಟಕ್ಕೆ ಇಳಿದಿದ್ದೇವೆ. ಇದು ಯಾವ ಭಾರತ ಎಂದು ಪ್ರಶ್ನಿಸಿದ ಡಾ.ಜಿ.ಪರಮೇಶ್ವರ್, ಎಐ ಯುಗದಲ್ಲಿರುವ ನಾವು ಬುದ್ದ, ಬಸವ, ಗಾಂಧಿ ಹೇಳಿದ ಸಮಾನತೆಯ ಬಗ್ಗೆ ಮಾತನಾಡುತ್ತಿದ್ದೇವೆಯೇ ಹೊರತು ಅನುಸರಿಸುತ್ತಿಲ್ಲ. ವಿದ್ಯಾವಂತರು, ಪದವಿಧರರ ಸಂಖ್ಯೆ ಹೆಚ್ಚಾದಂತೆ ಅಸಮಾನತೆ ತೊಲಗಬೇಕಿತ್ತು. ಆದರೆ ಅದು ಮತ್ತೊಂದು ರೂಪದಲ್ಲಿ ನಮ್ಮೊಳಗೆ ಬೇರೂರುತ್ತಿದೆ.ವೇದಿಕೆಗಳಲ್ಲಿ ಮಾತನಾಡುವ ರೀತಿಯಲ್ಲಿ ನಾವು ನಡೆದುಕೊಳ್ಳುತ್ತಿಲ್ಲ.ನಮ್ಮ ನಡತೆ ಸರಿ ಹೋಗದ ಸಮಾನತೆ ಎಂಬುದು ಸಾಧ್ಯವಿಲ್ಲ ಎಂದರು.
ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಗಾಂಧಿ ಪ್ರಸ್ತುತತೆ ಕುರಿತು ಉಪನ್ಯಾಸ ನೀಡಿದರು. ಕಾಗಿನೆಲೆ ಗುರು ಪೀಠಾಧೀಶ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ, ಶ್ರೀದೇವಿ ಶಿಕ್ಷಣ ಸಂಸ್ಥೆಗಳ ಸಮೂಹದ ಸಂಸ್ಥಾಪಕ ಅಧ್ಯಕ್ಷ ಡಾ. ಎಂ.ಆರ್. ಹುಲಿನಾಯ್ಕರ್ ಮೊದಲಾದವರು ವೇದಿಕೆಯಲ್ಲಿದ್ದರು.


