ಸುಟ್ಟು ಹೋದ ಕಾರಿನಲ್ಲಿ ವ್ಯಕ್ತಿಯೊಬ್ಬರು ಕೂಡ ಸುಟ್ಟು ಕರಕಲಾಗಿರುವ ಘಟನೆ ತುಮಕೂರು ಜಿಲ್ಲೆಯ ಸಿರಾ ತಾಲೂಕಿನಲ್ಲಿ ನಡೆದಿದೆ. ಕಾರು ಸುಟ್ಟು ಹೋಗಲು ಕಾರಣವೇನು ಎಂಬ ಬಗ್ಗೆ ಇದುವರೆಗೂ ಮಾಹಿತಿ ದೊರೆತಿಲ್ಲ.
ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ಮುದ್ದರಂಗನಹಳ್ಳಿ ಹಾಗೂ ಮೇಲುಕುಂಟೆ ರಸ್ತೆ ಮಧ್ಯದ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಕಾರಿನಲ್ಲಿ ಸುಟ್ಟು ಕರಕಲಾದ ವ್ಯಕ್ತಿಯನ್ನು ದಾವಣಗೆರೆ ಮೂಲದ ಮಂಜುನಾಥ್ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಾರು ಸುಟ್ಟು ಹೋಗಿರುವುದನ್ನು ನೋಡಲು ಬಂದ ಸ್ಥಳೀಯರಿಗೆ ಕಾರಿನೊಳಗೆ ಶವ ಇರುವುದನ್ನು ಕಂಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಕಾರು ಯಾರದ್ದು, ಕರಕಲಾಗಿರುವ ವ್ಯಕ್ತಿ ಯಾರು ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ವಿಕೆ ಮತ್ತು ಪಟ್ಟನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಸುಟ್ಟ ಸ್ಥಿತಿಯಲ್ಲಿದ್ದ ಇಂಡಿಕಾ ಕಾರನ್ನು ಪರಿಶೀಲಿಸಿದ್ದಾರೆ.
ಕಾರಿನಲ್ಲಿ ಇಬ್ಬರು ಬಂದಿರುವ ಬಗ್ಗೆ ಮಾಹಿತಿ ದೊರೆತಿದ್ದು ಇವರಿಬ್ಬರಲ್ಲಿ ಅಣ್ಣಪ್ಪ ಜೊತೆಯಲ್ಲಿದ್ದುದು ತಿಳಿದುಬಂದಿದೆ. ಸದ್ಯಕ್ಕೆ ಮೃತರು ಯಾರು, ಅಣ್ಣಪ್ಪ ಎಲ್ಲಿಗೆ ಹೋದ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


