Tuesday, January 20, 2026
Google search engine
Homeಮುಖಪುಟಅನರ್ಹತೆ ನೆಪ ಹೇಳಿ ಅತಿಥಿ ಉಪನ್ಯಾಸಕರ ಹೊರಕ್ಕಿಟ್ಟ ಇಲಾಖೆ-ಆಕ್ರೋಶ

ಅನರ್ಹತೆ ನೆಪ ಹೇಳಿ ಅತಿಥಿ ಉಪನ್ಯಾಸಕರ ಹೊರಕ್ಕಿಟ್ಟ ಇಲಾಖೆ-ಆಕ್ರೋಶ

ನ್ಯಾಯಾಲಯಕ್ಕೆ ನೀಡಿದ ಮೌಖಿಕ ಭರವಸೆ ಹುಸಿಗೊಳಿಸಿ, 6000ಕ್ಕು ಹೆಚ್ಚು ಅತಿಥಿ ಉಪನ್ಯಾಸಕರನ್ನು, ಅವರ 20 ವರ್ಷಗಳ ಸೇವೆಯನ್ನು ಪರಿಗಣಿಸದೆ, ಅನರ್ಹ ಎಂಬ ಹಣೆಪಟ್ಟಿಕಟ್ಟಿ, ಸೇವೆಯಿಂದ ತೆಗೆದು ಹಾಕಿರುವ ಉನ್ನತ ಶಿಕ್ಷಣ ಇಲಾಖೆಯ ಕ್ರಮವನ್ನು ಖಂಡಿಸಿ, 2026ರ ಜನವರಿ 5 ರಂದು ಅತಿಥಿ ಉಪನ್ಯಾಸಕರ ಕ್ಷೇಮಾಭಿವೃದ್ದಿ ಸಂಘದ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಮನೆಯ ಮುಂದೆ ಹೋರಾಟ ನಡೆಸುವುದಾಗಿ ಸಂಘದ ಅಧ್ಯಕ್ಷ ಲೋಕೇಶ್.ಪಿ.ಸಿ.ತಿಳಿಸಿದ್ದಾರೆ.

ತುಮಕೂರು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 20ಕ್ಕೂ ಹೆಚ್ಚು ವರ್ಷಗಳ ಕಾಲ ನಮ್ಮಿಂದ ಸೇವೆ ಪಡೆದು, ಈಗ ಅನರ್ಹ ಎಂದು ಹೇಳಿ ಕೆಲಸದಿಂದ ತೆಗೆಯುವ ಮೂಲಕ ಹೈಕೋರ್ಟ್ ಆದೇಶ ಉಲ್ಲಂಘನೆಯ ಜೊತೆಗೆ, ಯುಜಿಸಿ ನಿಯಮವನ್ನು ರಾಜ್ಯ ಸರಕಾರ ಗಾಳಿಗೆ ತೂರಿದೆ. ಸರಕಾರದ ಈ ಜನವಿರೋಧಿ ನಡೆಯ ವಿರುದ್ದ ಸರಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಜೊತೆಗೆ, ಪ್ರಾಥಮಿಕ ಶಾಲೆಗಳಲ್ಲಿ ಕೆಪಿಎಸ್ ಮ್ಯಾಗ್ನಟ್ ಶಾಲೆಯ ಹೆಸರಿನಲ್ಲಿ ಅತಂತ್ರರಾಗಿರುವ 70 ಸಾವಿರ ಅತಿಥಿ ಉಪನ್ಯಾಸಕರು ಒಗ್ಗೂಡಿ ಹೋರಾಟದಲ್ಲಿ ಪಾಲ್ಗೊಳ್ಳಲಾಗುವುದು ಎಂದರು.

ನಾವು ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಅತಿಥಿ ಉಪನ್ಯಾಸಕರಾಗಿ ಸೇರುವ ಸಂದರ್ಭದಲ್ಲಿ ಶೇ.65 ರಷ್ಟು ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಪಡೆದಿದ್ದರೆ ಸಾಕು ಎಂಬ ಮಾನದಂಡ ಮುಂದಿಟ್ಟು, ನಮ್ಮನ್ನು ಅತ್ಯಂತ ಕಡಿಮೆ ಗೌರವ ಧನಕ್ಕೆ ದುಡಿಸಿಕೊಂಡು, ಇನ್ನೇನು ನಿವೃತ್ತಿಯ ವಯಸ್ಸು ಹತ್ತಿರವಾಗುತ್ತಿದೆ ಎನ್ನುವ ಸಂದರ್ಭದಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ 6ಸಾವಿರಕ್ಕೂ ಅಧಿಕ ಅತಿಥಿ ಉಪನ್ಯಾಸಕರನ್ನು ಬೀದಿಗೆ ತಳ್ಳಿದೆ. ಕರ್ನಾಟಕ ಹೈಕೋರ್ಟಿಗೆ 24-11-2025ರಂದು ಸರಕಾರದ ಪರವಾಗಿ ಅಡ್ವಕೇಟ್ ಜನರಲ್ ಅವರು ಹಾಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಯಾವುದೇ ತೊಂದರೆ ನೀಡುವುದಿಲ್ಲ ಎಂದು ನ್ಯಾಯಪೀಠಕ್ಕೆ ಮೌಖಿಕ ಭರವಸೆ ನೀಡಿ, ಡಿಸೆಂಬರ್ 8 ರಂದು ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರು ಹಾಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಬಿಡುಗಡೆಗೊಳಿಸಲು ಆದೇಶ ನೀಡಿರುವುದು ಸರಿಯಲ್ಲ ಎಂದರು.

ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಕ್ಷೇಮಾಭಿವೃದ್ದಿ ಸಂಘದ ಸದಸ್ಯ ಮಂಜುನಾಥ್ ಜೋಗಿ ಮಾತನಾಡಿ, ಸುಪ್ರಿಂಕೋರ್ಟಿನ ಆದೇಶದಂತೆ ಅತಿಥಿ ಉಪನ್ಯಾಸಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುತ್ತಿಲ್ಲ. ಸತತ 10 ವರ್ಷ ಕಾರ್ಯ ನಿರ್ವಹಿಸಿದ ಉಪನ್ಯಾಸಕರನ್ನು ಖಾಯಂಗೊಳಿಸಬೇಕು ಎಂಬ ಆದೇಶವನ್ನು ಪಾಲಿಸುತ್ತಿಲ್ಲ. ಬದಲಿಗೆ ಯುಜಿಸಿ ನಿಯಮದ ಕೆಲವೇ ಅಂಶಗಳನ್ನು ಮುಂದಿಟ್ಟು, ನೀವು ನೆಟ್, ಸ್ಲಟ್, ಎಂ.ಫಿಲ್, ಪಿಹೆಚ್‌ಡಿ ಪಡೆದಿಲ್ಲ. ಹಾಗಾಗಿ ನೀವು ಆರ್ಹರಲ್ಲ ಎಂದು ಬೀದಿಗೆ ತಳ್ಳಲು ಹೊರಟಿದೆ. ನಮ್ಮನ್ನು ಸೇವೆಗೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಅಗತ್ಯವಿಲ್ಲದ ಈ ಆರ್ಹತೆಗಳು, 20 ವರ್ಷ ಪಾಠ ಮಾಡಿ, ಸಾವಿರಾರು ಮಕ್ಕಳಿಗೆ ಪದವಿ ಶಿಕ್ಷಣ ನೀಡಿ, ಅವರಿಗೆ ದಾರಿದೀಪ ಕಲ್ಪಿಸಿದ ನಂತರ ಉದ್ಬವಿಸಿದ್ದು ಏಕೇ? ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ನಾವು ಆನರ್ಹರು ಎಂದಾದರೆ, ನಮ್ಮ ಪಾಠ ಕೇಳಿ ಪದವಿಧರರಾದವರು ಅರ್ಹ ಪದವಿಧರರೇ ? ಈ ಪ್ರಶ್ನೆಗೆ ಸರಕಾರವೇ ಉತ್ತರ ನೀಡಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಕ್ಷೇಮಾಭಿವೃದ್ದಿ ಸಂಘದ ಖಜಾಂಚಿ ಮನೋಹರ್.ಎಸ್, ರಂಗಸ್ವಾಮಿ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular