ಬಿಜೆಪಿಯವರ ದ್ವೇಷ ರಾಜಕಾರಣ ನ್ಯಾಯ ದೇವತೆಯ ಎದುರು ಸೋತಿದೆ. ಕೇಂದ್ರ ಅಥವಾ ರಾಜ್ಯಗಳಾಗಲಿ, ಬಿಜೆಪಿ ಅಧಿಕಾರದಲ್ಲಿರುವ ಕಡೆಗಳಲ್ಲೆಲ್ಲಾ ಕಾಂಗ್ರೆಸ್ ನವರನ್ನು ಗುರಿಯಾಗಿಸಿ, ಅವರನ್ನು ಅಪರಾಧಿಗಳಾಗಿ ಬಿಂಬಿಸಿ, ನ್ಯಾಯಾಲಯಕ್ಕೆ ಎಡತಾಕುವಂತೆ ಮಾಡುತ್ತಿದ್ದಾರೆ. ಇಂತಹ ಅಸತ್ಯವಾದ ವಿಚಾರವನ್ನು ಮುನ್ನಲೆಗೆ ತಂದು ಬಿಜೆಪಿಯವರು ಸ್ವಾರ್ಥ ಸಾಧನೆಯಲ್ಲಿ ತೊಡಗಿದ್ದಾರೆ. ಬಿಜೆಪಿಯವರು ತಮ್ಮ ತಪ್ಪುಗಳನ್ನು ಮರೆಮಾಚಲು ಇಂತಹ ದುಷ್ಕೃತ್ಯಕ್ಕೆ ಕೈಹಾಕಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕೇಂದ್ರ ಎನ್‌ಡಿಎ ಸರ್ಕಾರದ ದ್ವೇಷ ರಾಜಕೀಯವನ್ನು ಖಂಡಿಸಿ ಬೆಳಗಾವಿಯ ಸುವರ್ಣಸೌಧದ ಗಾಂಧಿ ಪ್ರತಿಮೆ ಬಳಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ದೇಶದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಹಣದುಬ್ಬರ ಹೆಚ್ಚಿದ್ದು ನಿರುದ್ಯೋಗದ ಪ್ರಮಾಣ ಏರಿಕೆಯಾಗಿದೆ. ಜನರ ಮೇಲೆ ತೆರಿಗೆಗಳನ್ನು ಮನಬಂದಂತೆ ಹೇರಲಾಗುತ್ತಿದೆ, ಭಾರತವನ್ನು ಸಾಲಗಾರ ದೇಶವನ್ನಾಗಿ ಮಾಡಲಾಗುತ್ತಿದೆ ಎಂದು ಟೀಕಿಸಿದರು.
ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಪ್ರತಿವರ್ಷ 2 ಕೋಟಿ ಉದ್ಯೋಗವನ್ನು ಸೃಷ್ಟಿಸುವುದಾಗಿ ಘೋಷಿಸಿದ್ದರು. ವಿದೇಶದಲ್ಲಿನ ಕಪ್ಪುಹಣವನ್ನು ದೇಶಕ್ಕೆ ತಂದು ದೇಶದ ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂ.ಗಳನ್ನು ನೀಡುವುದಾಗಿ ಹೇಳಿದರು. ಈ ಯಾವುದೇ ಭರವಸೆಗಳನ್ನು ಮೋದಿಯವರು ಈಡೇರಿಸಲಿಲ್ಲ. ಇತ್ತೀಚೆಗೆ ದೈನಂದಿನ ಬಳಕೆಯ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆಗಳು ಗಗನಕ್ಕೇರಿವೆ. ಬಿಜೆಪಿಯವರು ತಮ್ಮ ಇಂತಹ ತಪ್ಪುಗಳನ್ನು ಮರೆಮಾಚಲು, ಇಂತಹ ಸುಳ್ಳು ಪ್ರಕರಣಗಳಿಗೆ ಹೆಚ್ಚು ಒತ್ತು ನೀಡುವ ಮೂಲಕ, ದೇಶದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಬದಲಿಸಿ VB-G RAM G ಯೋಜನೆಯೆಂದು ಬದಲಿಸಿದ್ದಾರೆ. ರಾಜಭವನವನ್ನು ಇಂದು ಲೋಕಭವನ ಎಂದು ಬದಲಾಯಿಸಿದ್ದಾರೆ. ಇದು ಸರ್ಕಾರದ ಆಸ್ತಿಯಾಗಿದ್ದು, ಇದರ ಹೆಸರನ್ನು ಬದಲಾವಣೆ ಮಾಡಿದ್ದು ಸರಿಯಲ್ಲ. ಕೇಂದ್ರ ಹೆಸರು ಬದಲಾಯಿಸುವ ಕಾರ್ಯದಲ್ಲಿ ನಿರತವಾಗಿದೆಯೇ ಹೊರತು ಬಡವರಿಗೆ ಅನುಕೂಲ ಕಲ್ಪಿಸುವ ಕೆಲಸವನ್ನು ಮಾಡುತ್ತಿಲ್ಲ ಎಂದು ದೂರಿದರು.


