Tuesday, January 20, 2026
Google search engine
Homeಮುಖಪುಟಎತ್ತಿನಹೊಳೆ ಯೋಜನೆ ವಿಳಂಬದ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ-ಮುರಳೀಧರ ಹಾಲಪ್ಪ

ಎತ್ತಿನಹೊಳೆ ಯೋಜನೆ ವಿಳಂಬದ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ-ಮುರಳೀಧರ ಹಾಲಪ್ಪ

ತುಮಕೂರು ಸೇರಿದಂತೆ ರಾಜ್ಯದ ಬಯಲು ಸೀಮೆಯ ಏಳು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ಯೋಜನೆ ವಿಳಂಬಕ್ಕೆ ನಿಜವಾದ ಕಾರಣಗಳೇನು ಎಂದು ತಿಳಿಸುವ ನಿಟ್ಟಿನಲ್ಲಿ ಡಿಸೆಂಬರ್ 18ರ ಗುರುವಾರ ತುಮಕೂರಿನಲ್ಲಿರುವ ಎತ್ತಿನಹೊಳೆ ಕಚೇರಿಗೆ ಸಾರ್ವಜನಿಕರೊಂದಿಗೆ ಭೇಟಿ ನೀಡಿ ಚರ್ಚೆ ನಡೆಸಲಾಗುವುದು ಎಂದು ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.

ತುಮಕೂರಿನಲ್ಲಿ ಆಯೋಜಿಸಿದ್ದ ಎತ್ತಿನಹೊಳೆ ಯೋಜನೆ ವಿಳಂಬಕ್ಕೆ ಕಾರಣಗಳು ಮತ್ತು ಪರಿಹಾರ ಎಂಬ ವಿಷಯ ಕುರಿತ ಸಮಾಲೋಚನಾ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಕಳೆದ ಸಭೆಯ ನಿಗದಿಯಂತೆ ದೆಹಲಿಯಲ್ಲಿ ಸಚಿವ ಸಿ.ಆರ್.ಪಾಟೀಲ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ. ಆದರೆ ಸಚಿವಾಲಯ ವಿಶ್ವೇಶ್ವರಯ್ಯ ಜಲನಿಗಮದ ಅಧಿಕಾರಿಗಳಿಂದ ವಿಳಂಬವಾಗಿದೆ ಎಂದು ಹೇಳುತಿದ್ದಾರೆ. ಹಾಗಾಗಿ ನಿಜವಾದ ಅಡೆ-ತಡೆ ಯಾರಿಂದ ಆಗಿದೆ. ಇದರ ಹಿಂದಿನ ಉದ್ದೇಶವೇನು ಎಂದು ಜಿಲ್ಲೆಯ ಜನರಿಗೆ ತಿಳಿಸುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಚರ್ಚೆ ನಡೆಸಲಾಗುವುದು ಎಂದರು.

ಕರ್ನಾಟಕ ಸರಕಾರ 2012 ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿ, ಶೇ.90 ರಷ್ಟು ನಾಲಾ ಕಾಮಗಾರಿ ಮುಕ್ತಾಯಗೊಂಡ ನಂತರ ಕೇಂದ್ರದ ಜಲಸಂಪನ್ಮೂಲ ಇಲಾಖೆ ಪರಿಸರ ಮತ್ತು ಅರಣ್ಯ ಇಲಾಖೆಯ ಎನ್.ಓ.ಸಿ ಕುರಿತಂತೆ ತಕರಾರು ತೆಗೆದಿದೆ. ಇದುವರೆಗೂ ಎತ್ತಿನಹೊಳೆ ಯೋಜನೆಗಾಗಲಿ, ಭದ್ರ ಮೇಲ್ದಂಡೆ ಯೋಜನೆಗಾಗಲಿ ಒಂದು ನೈಯಾಪೈಸೆ ಹಣವನ್ನು ಕೇಂದ್ರ ಸರಕಾರ ನೀಡಿಲ್ಲ. ಬಜೆಟ್‌ನಲ್ಲಿ ಘೋಷಣೆ ಮಾಡಿಯೂ ಭದ್ರ ಮೇಲ್ದಂಡೆ ಯೋಜನೆಗೆ 5300 ಕೋಟಿ ಒಂದು ವರ್ಷ ಕಳೆದರೂ ನೀಡಿಲ್ಲ. ಇದರ ವಿರುದ್ದ ಎತ್ತಿನಹೊಳೆ ಯೋಜನಾ ವ್ಯಾಪ್ತಿಗೆ ಒಳಪಡುವ ಹಾಸನ, ತುಮಕೂರು, ಚಿತ್ರದುರ್ಗ, ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಜನರು ಈಗಲೇ ಎಚ್ಚೆತ್ತುಕೊಂಡು ಹೋರಾಟ ರೂಪಿಸದಿದ್ದರೆ ಇಷ್ಟು ದಿನದವರೆಗೆ ರಾಜ್ಯ ಸರಕಾರ ನಡೆಸಿ, ಕಾಮಗಾರಿಗಳು ಹೊಳೆಯಲ್ಲಿ ಹುಣಸೆಹಣ್ಣು ಕದಡಿದಂತಾಗುತ್ತದೆ. ಹಾಗಾಗಿ ಶತಾಯ, ಗತಾಯ ಕೇಂದ್ರ ಸರಕಾರದ ಎಲ್ಲಾ ಪ್ರಶ್ನೆಗಳಿಗೆ ಸಮಂಜಸ ಉತ್ತರ ನೀಡಿ, ಯೋಜನೆ ಪೂರ್ಣಗೊಳ್ಳುವಂತೆ ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ನೋಡಿಕೊಳ್ಳಬೇಕಾಗಿದೆ ಎಂದರು.

ಸಮಾಲೋಚನಾ ಸಭೆಯಲ್ಲಿ ಮುಖಂಡರಾದ ಸಂಜೀವಕುಮಾರ್, ಹೆಬ್ಬೂರು ಶ್ರೀನಿವಾಸಮೂರ್ತಿ, ರೈತ ಮುಖಂಡರಾದ ಷಡಕ್ಷರಿ, ನಿವೃತ್ತ ಅಧಿಕಾರಿ ಗೋವಿಂದೇಗೌಡ, ರೇವಣ್ಣಸಿದ್ದಯ್ಯ, ಪಿ.ಶಿವಾಜಿ, ದಸಂಸ ಮುಖಂಡರಾದ ಪಿ.ಎನ್.ರಾಮಯ್ಯ, ಗಣೇಶ್, ಆರ್.ವಿ.ಪುಟ್ಟಕಾಮಣ್ಣ, ಸೌಭಾಗ್ಯ, ಯಶೋಧಮ್ಮ, ಸಿಮೆಂಟ್ ಮಂಜುನಾಥ್, ಆದಿಲ್, ಜೈನ್, ಷೇಕ್ ಫಯಾಜ್, ಹರೀಶ್, ದಯಾನಂದ ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular