Wednesday, January 21, 2026
Google search engine
Homeಮುಖಪುಟತುಮಕೂರುವರೆಗೆ ಮೆಟ್ರೋ ವಿಸ್ತರಣೆ-ಸ್ವಾಗತ ಎಂದ ಜಿ.ಎಸ್.ಬಸವರಾಜು

ತುಮಕೂರುವರೆಗೆ ಮೆಟ್ರೋ ವಿಸ್ತರಣೆ-ಸ್ವಾಗತ ಎಂದ ಜಿ.ಎಸ್.ಬಸವರಾಜು

ಮಾದಾವರದಿಂದ-ತುಮಕೂರುವರೆಗೆ ಮೆಟ್ರೋ ವಿಸ್ತರಣೆಗೆ ಗೊಂದಲ ಬೇಡ. ಮಾದಾವರದಿಂದ-ತುಮಕೂರುವರೆಗೆ ಮೆಟ್ರೋ ವಿಸ್ತರಣೆ ಯೋಜನೆಯನ್ನು ಸ್ವಾಗತಿಸುತ್ತೇನೆ ಎಂದು ಮಾಜಿ ಸಂಸದ ಜಿ.ಎಸ್. ಬಸವರಾಜು ತಿಳಿಸಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಅವಧಿಯಲ್ಲಿ ಶ್ರಮಿಸಿದ್ದರೂ ಈ ಹಂತಕ್ಕೆ ಹೋಗಿರಲಿಲ್ಲ. ಈಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಸರ್ಕಾರ ವಿಶೇಷ ಆಸಕ್ತಿ ಮೆಚ್ಚುವಂತದ್ದು. ಭವಿಷ್ಯದ ದೃಷ್ಟಿಯಿಂದ ವಸಂತನರಸಾಪುರದವರೆಗೂ ವಿಸ್ತರಣೆ ಮಾಡುವುದು ಸೂಕ್ತವಾಗಿದೆ ಎಂದರು. ಯೋಜನೆಯ ಬಗ್ಗೆ ಬಿನ್ನಾಭಿಪ್ರಾಯ ವ್ಯಕ್ತಪಡಿಸಿರುವ ಸಂಸದ ತೇಜಸ್ವಿ ಸೂರ್ಯ ಅವರನ್ನು ತುಮಕೂರಿಗೆ ಆಹ್ವಾನಿಸಿ, ಒಂದು ಸಂವಾದ ನಡೆಸುವುದು ಅಗತ್ಯವಾಗಿದೆ. ಕೇಂದ್ರ ಸಚಿವ ವಿ.ಸೋಮಣ್ಣ, ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕ ಸುರೇಶ್ ಗೌಡ ಮತ್ತು ಶಾಸಕ ಜಿ.ಬಿ.ಜ್ಯೋತಿಗಣೇಶ್ ಶ್ರಮಿಸುವ ಭರವಸೆ ಇದೆ ಎಂದಿದ್ದಾರೆ.

ಬೆಂಗಳೂರಿನ 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಮಕೂರು ಜಿಲ್ಲೆಯಲ್ಲಿ ನಿರ್ಮಾಣ ಮಾಡಲು ನನ್ನ ಅವಧಿಯಲ್ಲಿ ಆರಂಭಿಸಲಾಗಿತ್ತು. ಈಗ ಬೆಂಗಳೂರಿನ ಅಕ್ಕ-ಪಕ್ಕದ ಸ್ಥಳಗಳಿಗೆ, ಏರ್ ಪೋರ್ಟ್ ಆಥಾರಿಟಿ ಆಫ್ ಇಂಡಿಯಾ ನೀಡಿರುವ ಸಲಹೆಗಳನ್ನು ಪರಿಗಣಿಸಿ, ತುಮಕೂರು ಏರ್ ಪೋರ್ಟ್ ಸ್ಥಳದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಹಿರಂಗ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ಮೇಕೆದಾಟು ನ್ಯಾಯಾಲಯದ ತೀರ್ಪು ಸ್ವಾಗತವಾಗಿದೆ. 1948 ರಿಂದ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ಮೇಕೆದಾಟು ಯೋಜನೆ ಬಗ್ಗೆ ಚರ್ಚೆ ಆರಂಭಿಸಿದ್ದರೂ, ಈಗ ನ್ಯಾಯಾಲಯದ ತೀರ್ಪು ರಾಜ್ಯ ಸರ್ಕಾರಕ್ಕೆ ಆತ್ಮವಿಶ್ವಾಸ ಹೆಚ್ಚಿಸಿದೆ. ಸರ್ಕಾರ ಶೀಘ್ರವಾಗಿ ವರದಿ ಸಲ್ಲಿಸಿದ ನಂತರ ಪಕ್ಷಾತೀತವಾಗಿ ಪ್ರಧಾನಿ ನರೇಂದ್ರಮೋದಿ ಅವರ ಬಳಿ ನಿಯೋಗ ಹೋಗಿ ಮನವಿ ಮಾಡುವುದು ಅಗತ್ಯವಾಗಿದೆ. ಯೋಜನೆಗೆ ಶ್ರಮಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ, ರಾಜ್ಯದ ಎಲ್ಲಾ ಅವಧಿಯ ಮಾಜಿ ಮುಖ್ಯಮಂತ್ರಿಗಳು, ಮಾಜಿ ಜಲಸಂಪನ್ಮೂಲ ಸಚಿವರು, ತಜ್ಞರು ಮತ್ತು ಅಧಿಕಾರಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಬರೆದಿರುವ ‘ನೀರಿನ ಹೆಜ್ಜೆ’ ವಿವಾದ ಒಪ್ಪಂದ-ತೀರ್ಪು, ಪುಸ್ತಕದಲ್ಲಿನ ಬರಡು ಇಳೆಗೆ ನೀರುಣಿಸುವಲಿರುವ ಎತ್ತಿನಹೊಳೆ ಯೋಜನೆಯಲ್ಲಿ ದಿ. ‘ಜಿ.ಎಸ್.ಪರಮಶಿವಯ್ಯ ಶ್ರಮ’ವನ್ನು ಉಲ್ಲೇಖ ಮಾಡಿರುವುದು ನಿಜಕ್ಕೂ ಅಭಿನಂದನೀಯ. ವಿವಿಧ ತಜ್ಞರುಗಳೊಂದಿಗೆ ಸಮಾಲೋಚನೆ ನಡೆಸಿ, ‘ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ’ ಒದಗಿಸಲು ‘ಊರಿಗೊಂದು ಕೆರೆ-ಆ ಕೆರೆಗೆ ನದಿ ನೀರು’ ಘೋಷಣೆಯೊಂದಿಗೆ, ಕರ್ನಾಟಕ ಸಮಗ್ರ ನೀರಾವರಿ ಯೋಜನೆಗಳ ವಸ್ತುನಿಷ್ಠ ವರದಿಯನ್ನು ಶೀಘ್ರವಾಗಿ ಹೊರತರಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಕುಂದರನಹಳ್ಳಿ ರಮೇಶ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular