ಜಾತ್ಯತೀತ ಜನತಾದಳ ಸ್ಥಾಪನೆಯಾಗಿ 25 ವರ್ಷ ತುಂಬಿದ ಸಂದರ್ಭದಲ್ಲಿ ಪಕ್ಷದ ಕಚೇರಿ ಬೆಂಗಳೂರಿನ ಜೆ.ಪಿ. ಭವನದಲ್ಲಿ ನ.21 ಮತ್ತು 22ರಂದು ಬೆಳ್ಳಿಹಬ್ಬ ಆಚರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತುಮಕೂರು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ ತಿಳಿಸಿದರು.
ತುಮಕೂರಿನ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಸಂಸ್ಥಾಪಕರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅವಿರತ ಪರಿಶ್ರಮ ಮತ್ತು ದಣಿವರಿಯದ ನಾಯಕತ್ವವು ಜೆಡಿಎಸ್ 25 ವರ್ಷ ಪೂರೈಸಲು ಕಾರಣವಾಗಿದೆ. ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವವು ಪಕ್ಷವು ಮತ್ತಷ್ಟು ಬೇರೂರುವಂತೆ ಮಾಡಿತು ಎಂದು ಹೇಳಿದರು.
ಬೆಳ್ಳಿಹಬ್ಬ ಆಚರಣೆ ಅಂಗವಾಗಿ 21ರಂದು ಸಂಜೆ ಜೆ.ಪಿ.ಭವನದಲ್ಲಿ ಸೇವಾದಳ ಘಟಕದಿಂದ ಧ್ವಜಾರೋಹಣ ನಡೆಯಲಿದೆ. ನಂತರ ಹಾಲಿ ಹಾಗೂ ಮಾಜಿ ಸಚಿವರು, ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ಪ್ರದರ್ಶಿನಿ ಉದ್ಘಾಟನೆ ಮಾಡುವರು. ಸಂಜೆ 6-30ಕ್ಕೆ ವಿವಿಧ ರಾಜ್ಯಗಳಿಂದ ಬಂದಿರುವ ಪಕ್ಷದ ರಾಜ್ಯ ಪರಿಷತ್, ರಾಷ್ಟ್ರೀಯ ಪರಿಷತ್‌ಗಳ ಪ್ರತಿನಿಧಿಗಳ ಸಭೆ ನಡೆಯಲಿದೆ. 22ರಂದು ಪಕ್ಷದ ರಜತ ಮಹೋತ್ಸವ ಮತ್ತು ರಾಷ್ಟ್ರೀಯ ಮಹಾ ಅಧಿವೇಶನ ನಡೆಯಲಿದೆ. ಈ ಸಂದರ್ಭದಲ್ಲಿ ಬೆಳ್ಳಿಹಬ್ಬದ ಲಾಂಚನ ಬಿಡುಗಡೆ, ಕಿರುಚಿತ್ರ ಹಾಗೂ ಪಕ್ಷ ಬೆಳೆದು ಬಂದ ಹಾದಿಯ ಪ್ರದರ್ಶಿನಿಯ ಉದ್ಘಾಟನೆ ನಡೆಯಲಿದೆ ಎಂದು ಹೇಳಿದರು.
ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ, ಜೆಡಿಎಸ್‌ನ ಬೆಳ್ಳಿಹಬ್ಬ ಆಚರಣೆ ಅಂಗವಾಗಿ ಡಿಸೆಂಬರ್ 1ರಿಂದ 15ರವರೆಗೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳು ಮತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರದರ್ಶಿನಿಗಳು ಹಾಗೂ ಕಾರ್ಯಕರ್ತರ ಸಭೆ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನದಲ್ಲಿ ಬೃಹತ್ ಕಾರ್ಯಕರ್ತರ ಬೃಹತ್ ಸಮಾವೇಶ ಏರ್ಪಡಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಗುಬ್ಬಿ ಮುಖಂಡ ನಾಗರಾಜು ಮಾತನಾಡಿದರು. ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಮುಖಂಡರಾದ ಸೋಲಾರ್ ಕೃಷ್ಣಮೂರ್ತಿ, ಆರ್.ಉಗ್ರೇಶ್, ಮುದಿಮಡು ರಂಗಶಾಮಯ್ಯ, ಹೆಬ್ಬೂರು ರಾಮಣ್ಣ, ಯೋಗಾನಂದಕುಮಾರ್, ಗಂಗಣ್ಣ, ಭೈರೇಶ್, ಎಸ್.ಡಿ.ಕೃಷ್ಣಪ್ಪ, ಲೀಲಾವತಿ, ರಂಗನಾಥ್, ಸೊಗಡು ವೆಂಕಟೇಶ್, ಕೆಂಪರಾಜು, ಲಕ್ಷö್ಮಮ್ಮ, ಮಧುಗೌಡ, ಆಂಜನಪ್ಪ, ರಾಧಾ, ಯಶೋಧ ಹಾಜರಿದ್ದರು.


