Tuesday, January 20, 2026
Google search engine
Homeಮುಖಪುಟಕೆ.ಎನ್.ಆರ್.ಗೆ ಸಚಿವ ಸ್ಥಾನ ನೀಡಲು ಒತ್ತಾಯ-ಸಿಎಂ ಬಳಿಗೆ ನಿಯೋಗ ತೆರಳಲು ನಿರ್ಧಾರ

ಕೆ.ಎನ್.ಆರ್.ಗೆ ಸಚಿವ ಸ್ಥಾನ ನೀಡಲು ಒತ್ತಾಯ-ಸಿಎಂ ಬಳಿಗೆ ನಿಯೋಗ ತೆರಳಲು ನಿರ್ಧಾರ

ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ತುಮಕೂರು ಜಿಲ್ಲೆಯ ಮಧುಗಿರಿ ಕ್ಷೇತ್ರದ ಶಾಸಕ ಕೆ.ಎನ್.ರಾಜಣ್ಣನವರನ್ನು ಮಂತ್ರಿಮಂಡಲಕ್ಕೆ ಸರ್ಪಡೆ ಮಾಡಿಕೊಳ್ಳಬೇಕೆಂದು ಜಿಲ್ಲೆಯ ಹಿಂದುಳಿದ ವರ್ಗಗಳ ಒಕ್ಕೂಟ ಆಗ್ರಹಿಸಿದೆ. ರಾಜಣ್ಣನವರಿಗೆ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ನಿಯೋಗ ಕೊಂಡೊಯ್ಯಲು ಹಿಂದುಳಿದ ವರ್ಗಗಳ ಸಮಾಜಗಳ ಮುಖಂಡರು ತೀರ್ಮಾನಿಸಿದ್ದಾರೆ.

ತುಮಕೂರು ಜಿಲ್ಲೆಯ ಪ್ರಭಾವಿ ನಾಯಕ, ಹಿಂದುಳಿದ ವರ್ಗಗಳ ಆಶಾಕಿರಣವಾಗಿರುವ ಕೆ.ಎನ್.ರಾಜಣ್ಣ ಯಾವುದೇ ತಪ್ಪು, ಭ್ರಷ್ಟಾಚಾರ ಮಾಡದಿದ್ದರೂ ಕ್ಷುಲ್ಲಕ ಕಾರಣ ನೀಡಿ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಿ ಅವಮಾನ ಮಾಡಿರುವುದು ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ತೀವ್ರ ನೋವಾಗಿದೆ ಎಂದು ಅಧ್ಯಕ್ಷ ಡಾ.ಧನಿಯಾ ಕುಮಾರ್ ಹೇಳಿದ್ದಾರೆ.

ಕೆ.ಎನ್.ಆರ್. ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಹಿಂದುಳಿದ ವರ್ಗಗಳ ಮುಖಂಡರ ಸಹಿ ಸಂಗ್ರಹಿಸಿದ ಮನವಿ ಪತ್ರವನ್ನು ಈಗಾಗಲೇ ಎಐಸಿಸಿ ನಾಯಕ ರಾಹುಲ್‌ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಲುಪಿಸಲಾಗಿದೆ. ಈಗ ಮಂತ್ರಿಮಂಡಲ ವಿಸರ್ಜನೆಯ ಚರ್ಚೆಗಳು ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಕೆ.ಎನ್.ರಾಜಣ್ಣನವರಿಗೆ ಮಂತ್ರಿ ಸ್ಥಾನ ನೀಡಲೇಬೇಕು ಎಂದು ಆಗ್ರಹಿಸಿದ್ದಾರೆ.

2013 ಹಾಗೂ 2023ರಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಲು ಕೆ.ಎನ್.ರಾಜಣ್ಣನವರ ಪ್ರಭಾವ ಹಾಗೂ ಶ್ರಮವೂ ಕಾರಣ. ಜಿಲ್ಲೆಯ 26 ಲಕ್ಷ ಜನಸಂಖ್ಯೆಯಲ್ಲಿ ಸುಮಾರು 12 ಲಕ್ಷ ಜನ ಹಿಂದುಳಿದ ವರ್ಗಗಳ ಸಮಾಜದವರಿದ್ದು, ಇವರು ಕೆ.ಎನ್.ಆರ್ ಅವರ ಬೆಂಬಲಕ್ಕಿದ್ದಾರೆ. ಈ ಬಾರಿ ಸಚಿವ ಸ್ಥಾನ ನೀಡಲು ನಿರ್ಲಕ್ಷಿಸಿದರೆ ಮುಂಬರುವ ಸ್ಥಳೀಯ ಸಂಸ್ಥೆ, ತಾಲ್ಲೂಕು, ಜಿಲ್ಲಾ ಪಂಚಾಯ್ತಿ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳ ಸಮಾಜದವರು ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular