ಕನ್ನಡದ ಕ್ರಿಯಾಶೀಲ ಮನಸ್ಸುಗಳನ್ನು ಒಂದೆಡೆ ಸೇರಿಸಿ ಚರ್ಚಿಸುವ ಉದ್ದೇಶದ ಸಮಾಜಮುಖಿ ಸಾಹಿತ್ಯ ಸಮ್ಮೇಳನ ನ. 8 ಮತ್ತು 9ರಂದು ಬೆಂಗಳೂರಿನ ಅರಮನೆ ರಸ್ತೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ಏರ್ಪಾಟಾಗಿದೆ ಎಂದು ಲೇಖಕಿ ಬಾ.ಹ.ರಮಾಕುಮಾರಿ ತಿಳಿಸಿದರು.
ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮ್ಮೇಳನವು ಕ್ರಿಯಾಶೀಲ ಬರಹಗಾರರು ಹಾಗೂ ವಿಮರ್ಶಾತ್ಮಕ ಚಿಂತಕರನ್ನು ಒಟ್ಟುಗೂಡಿಸುವ ವೇದಿಕೆಯಾಗಿದೆ. ಪ್ರಮುಖ ಕನ್ನಡ ಬರಹಗಾರರು, ಚಿಂತಕರೊಂದಿಗೆ ಸಾಹಿತ್ಯ ಹಾಗೂ ಸಮಾಜದ ವಿಷಯಗಳ ಕುರಿತು ಚರ್ಚೆ ನಡೆಯಲಿದೆ ಎಂದು ಹೇಳಿದರು.
ಪ್ರಧಾನ ವೇದಿಕೆ ಹಾಗೂ ನಾಲ್ಕು ಸಮಾನಾಂತರ ವೇದಿಕೆಗಳಲ್ಲಿ ವಿವಿಧ ವಿಚಾರಗಳ ಗೋಷ್ಠಿಗಳು ನಡೆಯಲಿವೆ. ನ.8ರಂದು ಬೆಳಿಗ್ಗೆ 11.30ಕ್ಕೆ ಪ್ರಧಾನ ವೇದಿಕೆಯಲ್ಲಿ ಹಂ.ಪ.ನಾಗರಾಜಯ್ಯ, ಬರಗೂರು ರಾಮಚಂದ್ರಪ್ಪ, ಹೆಚ್.ಎಸ್.ಶಿವಪ್ರಕಾಶ್ ಸಮಾಜಮುಖಿ ಸಾಹಿತ್ಯ ಸಮ್ಮೇಳನ ಉದ್ಘಾಟಿಸುವರು. ನಂತರ ವಿವಿಧ ವೇದಿಕೆಗಳಲ್ಲಿ ಹೆಸರಾಂತ ಬರಹಗಾರರು, ಸಾಹಿತ್ಯ ಚಿಂತಕರು ಒಳಗೊಂಡ ನಾನಾ ವಿಷಯಗಳ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಮೊದಲನೆ ದಿನದ ಸಮ್ಮೇಳನದಲ್ಲಿ ಹಳಗನ್ನಡ ಸಾಹಿತ್ಯ-ಹಿಂದಣ ಹೆಜ್ಜೆಯನ್ನರಿತಲ್ಲದೆ ಎಂಬ ವಿಚಾರ, 21ನೇ ಶತಮಾನದ ಕಥಾ ನಿರೂಪಣೆಯ ಸವಾಲುಗಳು, ಅನುಭವ ಲೋಕದ ಸೃಜನಶೀಲತೆ, ಚಾಟಿ ಹಿಡಿಯದ ಚಾಳಿ ಎಂಬ ವಿಚಾರವಾಗಿ ಕನ್ನಡ ವಿಮರ್ಶಾ ಸಾಹಿತ್ಯವೇಕೆ ಬತ್ತಿಹೋಗಿದೆ ಎನ್ನುವ ಚರ್ಚೆ ನಡೆಯಲಿದೆ. ಕನ್ನಡದ ಭಾಷಾ ಬಿಕ್ಕಟ್ಟುಗಳು, ದಮನೀಯ ಸಾಹಿತ್ಯ-ಮುಖ್ಯಧಾರೆಗೆ ವಿಲೀನವಾಗಿದೆಯೆ?, ವರ್ತಮಾನದ ಸಿನಿಮಾ-ತಂತ್ರಜ್ಞಾನ ಮರೆಸುತ್ತಿರುವ ಮಾನವ ಸ್ವಭಾವಗಳು, ಅಂಬೇಡ್ಕರ್ ಮತ್ತು ಗಾಂಧಿ ಚಿಂತನೆಗಳೊಡನೆ ಕನ್ನಡ ಸಾಹಿತ್ಯ ಅನುಸಂಧಾನ, ಪರಿಸರ ಪತ್ರಿಕೋದ್ಯಮ ಮತ್ತುಛಾಯಾಗ್ರಹಣದ ಅಂತ:ಕರಣ, ಬಿಕ್ಕಟ್ಟಿನಲ್ಲಿ ಗಣತಂತ್ರ ಮತ್ತು ಪ್ರಜಾಪ್ರಭುತ್ವ, ಜಾಗತಿಕ ಭಾಷೆಯೆಡೆಗೆ ಪ್ರಾಚೀನ ಸಾಹಿತ್ಯ ನಡಿಗೆ ಮೊದಲಾದ ವಿಚಾರಗಳ ಬಗ್ಗೆ ಸಾಹಿತ್ಯ ಚಿಂತಕರು ಚರ್ಚೆ ಮಾಡಲಿದ್ದಾರೆ ಎಂದು ಬಾ.ಹ.ರಮಾಕುಮಾರಿ ಹೇಳಿದರು.
ಲೇಖಕ ಲಕ್ಷ್ಮಿಕಾಂತರಾಜೇ ಅರಸ್ ಮಾತನಾಡಿ, ಸಾಹಿತ್ಯಾಸಕ್ತರಿಗೆ, ವಿದ್ಯಾರ್ಥಿಗಳಿಗೆ ಈ ಸಮ್ಮೇಳನ ಹೆಚ್ಚು ಉಪಯೋಗವಾಗಲಿದೆ. ತಮ್ಮ ಪುಸ್ತಕಗಳನ್ನು ಬಿಡುಗಡೆ ಮಾಡುವವರಿಗೂ ಸಮ್ಮೇಳನದಲ್ಲಿ ಉಚಿತವಾಗಿ ಅವಕಾಶ ನೀಡಲಾಗುತ್ತದೆ. ಹೊಸ ಬರಹಗಾರರಿಗೆ ನೆರವಾಗುವಂತಹ ಬರವಣಿಗೆ ಕಾರ್ಯಾಗಾರ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಎರಡು ದಿನಗಳ ಸಾಹಿತ್ಯ ಸಮ್ಮೇಳದಲ್ಲಿ ಭಾಗವಹಿಸಲು 300 ರೂ.ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ರಿಯಾಯಿತಿ ನೀಡಿ 200 ರೂ. ಹೆಸರು ನೋಂದಾಯಿಸಿಕೊಳ್ಳಬಹುದು. ಜಿಲ್ಲೆಯ ಸಾಹಿಸ್ಯಾಸಕ್ತರು, ವಿದ್ಯಾರ್ಥಿಗಳು ಈ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಬೇಕು ಎಂದು ಕೋರಿದರು.
ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ, ಸಾಹಿತಿ ಮಿರ್ಜಾ ಬಷೀರ್, ಇಂಗ್ಲೀಷ್ ಪ್ರಾಧ್ಯಾಪಕಿ ಡಾ.ಜ್ಯೋತಿ ಇದ್ದರು.


