ತುಮಕೂರು ನಗರದ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ತಮಗೆ ಪೂರ್ಣ ಅರಿವಿದೆ. ಆದರೆ ಅವುಗಳನ್ನು ನಿವಾರಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಅಗತ್ಯವಿರುವ ಅನುದಾನವಿಲ್ಲ. ಪ್ರಸ್ತುತ ಆಗಬೇಕಾಗಿರುವ ಒಳಚರಂಡಿ ಮತ್ತು ಕುಡಿಯುವ ನೀರಿನ ಯೋಜನೆಯನ್ನು ಪೂರ್ಣಗೊಳಿಸಲು ಕನಿಷ್ಟ 500 ಕೋಟಿ ರೂ. ಬೇಕು, ಸರ್ಕಾರ 2-3 ಕೋಟಿ ರೂ. ಅನುದಾನ ಕೊಟ್ಟರೆ ಯೋಜನೆಯನ್ನು ಸಮರ್ಪಕವಾಗಿ ಕಾರ್ಯಗತಗೊಳಿಸುವುದು ಕಷ್ಟ ಎಂದು ತುಮಕೂರು ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.
ತುಮಕೂರಿನ 3ನೇ ವಾರ್ಡಿನಲ್ಲಿ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ನಗರದ ಬೆಳವಣಿಗೆಯಲ್ಲಿ ನಾಗರೀಕ ಸಮಿತಿಗಳ ಜವಾಬ್ದಾರಿ ಮುಖ್ಯವಾಗಿದೆ. ಆಯಾ ಪ್ರದೇಶಗಳ ನಾಗರೀಕ ಸಮಿತಿಗಳ ಸಲಹೆ ಪಡೆದು ಅಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳುವುದಾಗಿ ಹೇಳಿದರು.
ತುಮಕೂರು ನಗರ ವಿಸ್ತಾರವಾಗಿ ಬೆಳೆಯುತ್ತಿದೆ. ಹೊಸ ಬಡಾವಣೆಗಳು ನಿರ್ಮಾಣವಾಗುತ್ತಿವೆ. ಅಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಮುಂತಾದ ನಾಗರೀಕ ಸೌಲಭ್ಯ ಒದಗಿಸಲು ಪೂರಕ ಅನುದಾನ ಬೇಕಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಅನುದಾನದ ಕೊರತೆ ಇದೆ. ನಗರದಲ್ಲಿ ಸುಮಾರು 1500 ಕಿಲೋ ಮೀಟರ್ ಉದ್ದದ ಚರಂಡಿ ಇದೆ. ಅನೇಕ ಕಡೆ ರಸ್ತೆ ಒತ್ತುವರಿಯಾಗಿ ಚರಂಡಿ ನಿರ್ಮಾಣವೂ ಸಮಸ್ಯೆಯಾಗಿದೆ ಎಂದರು.


