Thursday, January 29, 2026
Google search engine
Homeಮುಖಪುಟಅಭಿವೃದ್ಧಿ ಕಾಮಗಾರಿಗಳು ನಿಂತಿಲ್ಲ-ಡಾ.ಜಿ.ಪರಮೇಶ್ವರ್

ಅಭಿವೃದ್ಧಿ ಕಾಮಗಾರಿಗಳು ನಿಂತಿಲ್ಲ-ಡಾ.ಜಿ.ಪರಮೇಶ್ವರ್

ತುಮಕೂರು ಜಿಲ್ಲೆಯಲ್ಲಿ 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಿಂತಿಲ್ಲ. ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದ ಜತೆ ಜತೆಯಲ್ಲಿಯೇ ರಾಜ್ಯಾದ್ಯಂತ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಅಂತೆಯೇ ತುಮಕೂರು ಜಿಲ್ಲೆಯಲ್ಲಿ ಸುಮಾರು 10 ಸಾವಿರ ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ಕನ್ನಡದ ನೆಲ ಮತ್ತು ಜಲ ಸಂರಕ್ಷಣೆ ಸರ್ಕಾರದ ಆದ್ಯತೆಯಾಗಿದೆ. ಕೆಲವು ಕಟ್ಟಡಗಳ ನಿರ್ಮಾಣ ಕಾರ್ಯ ಕುಂಠಿತವಾಗಿದ್ದ ಹಿನ್ನೆಲೆಯಲ್ಲಿ ಉದ್ಘಾಟನೆಗೆ ತಡವಾಗಿದೆ. ತುಮಕೂರು ನಗರದ ಬಿದರಕಟ್ಟೆಯಲ್ಲಿ ನಿರ್ಮಾಣಗೊಂಡಿರುವ ತುಮಕೂರು ವಿಶ್ವ ವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸನ್ನು ನವೆಂಬರ್ 7ರಂದು ರಾಜ್ಯಪಾಲರು ಉದ್ಘಾಟಿಸಲಿದ್ದಾರೆ. ಅಂದೇ ಮುಖ್ಯಮಂತ್ರಿ ಸಿದ್ದರಾಮಯ್ಯ ತುಮಕೂರು ನಗರದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ತಿಳಿಸಿದರು.

ತುಮಕೂರು ಜಿಲ್ಲಾಸ್ಪತ್ರೆ ಆವರಣದಲ್ಲಿ 66 ಕೋಟಿ ವೆಚ್ಚದಲ್ಲಿ 100 ಹಾಸಿಗೆಯ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣವಾಗಿರುವ ಕಟ್ಟಡ, 22 ಕೋಟಿ ವೆಚ್ಚದ ತಾಯಿ-ಮಕ್ಕಳ ಆಸ್ಪತ್ರೆ ಹಾಗೂ 42 ಕೋಟಿ ವೆಚ್ಚದಲ್ಲಿ ತೀವ್ರನಿಗಾ ಘಟಕ, 78 ವರ್ಷದ ಹಳೆಯ ಜಿಲ್ಲಾ ಆಸ್ಪತ್ರೆ ಕಟ್ಟಡ ಶಿಥಿಲವಾಗಿರುವುದರಿಂದ 130 ಕೋಟಿ ವೆಚ್ಚದಲ್ಲಿ ಆಧುನಿಕ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ, 29 ಕೋಟಿ ವೆಚ್ಚದಲ್ಲಿ ಭೀಮಸಂದ್ರದ ಬಳಿ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಹಾಗೂ 130 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ 3ನೇ ಹಂತದ ಶುದ್ಧೀಕರಣ ಘಟಕ ಸೇರಿದಂತೆ ವಿವಿಧ ಕಾಮಗಾರಿಗಳನ್ನು ನವೆಂಬರ್ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ 169 ಕೋಟಿ ರೂ. ಮಂಜೂರಾಗಿದ್ದು, ಚರಂಡಿ, ರಸ್ತೆ ಮತ್ತು ಉದ್ಯಾನವನ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ನಗರ ಒಳಚರಂಡಿ ದುರಸ್ತಿಗೆ 50 ಕೋಟಿ ರೂ. ಮಂಜೂರಾಗಿದ್ದು, ದಿಬ್ಬೂರು ಮತ್ತು ದೋಬಿಘಾಟ್ ಬಳಿ ಎರಡು ಆರೋಗ್ಯ ಕೇಂದ್ರಗಳಿಗೆ 2 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯ ಪ್ರತಿ ತಾಲ್ಲೂಕಿಗೆ 300 ಕೋಟಿ ವೆಚ್ಚದಲ್ಲಿ ಶಾಲಾ ಕಟ್ಟಡ, ಚರಂಡಿ ಮತ್ತು ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂಬ ಆರೋಪಗಳಿಗೆ ಈ ಎಲ್ಲ ಕಾಮಗಾರಿಗಳು ನಿದರ್ಶನವಾಗಿವೆ ಎಂದು ಸ್ಪಷ್ಟಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular