ಲೇಖಕಿ ವಿಜಯ ಮೋಹನ್ ಭಾನುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ಸುಮಾರು 57 ವರ್ಷ ವಯಸ್ಸಾಗಿತ್ತು. ಮಧುಗಿರಿಯ ತಾಲೂಕು ಸುದ್ದೇಕುಂಟೆಯ ವಿಜಯ ಮೋಹನ್ ಮಧುಗಿರಿಯ ಕೆ.ಆರ್.ಬಡಾವಣೆಯಲ್ಲಿರುವ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.
ಈ ಕುರಿತು ವಿಮರ್ಶಕ ಡಾ.ರವಿಕುಮಾರ್ ನೀ.ಹ. ಬರೆದಿರುವ ಲೇಖನ ಇಲ್ಲಿದೆ.
ಮೊನ್ನೆ ರಾತ್ರಿಯಷ್ಟೇ ಮಾತನಾಡಿದ್ದೆ. ಅವರ ಹೊಸ “ಯಕನೀರು” ಕಾದಂಬರಿಗೆ ಮುನ್ನುಡಿ ಬರೆಯಲು ಕೇಳಿದ್ದರು. “ನವೆಂಬರ್ ಮೊದಲ ವಾರ ಕಳಿಸಿ. ಈ ವರ್ಷ ಪ್ರಕಟಿಸುವೆ. ಜೀರುಂಡೆ ಧನಂಜಯ ಒಪ್ಪಿದ್ದಾರೆ” ಎಂದಿದ್ದರು ವಿಜಯಮೋಹನ್ ಮೇಡಂ. ಈಗ ಅಘಾತಕಾರಿ ಸುದ್ದಿ..
ಕಳೆದ ಹದಿನೈದು ವರ್ಷಗಳ ಹಿಂದೆ ನಾವು ಗೆಳೆಯರೆಲ್ಲ ಸೇರಿ “ದೇಸಿಬಳಗ” ಕಟ್ಟಿಕೊಂಡಿದ್ದೆವು. ಹೊಸ ಬರಹಗಾರರ ಅಪ್ರಕಟಿತ ಕೃತಿಗಳನ್ನು ಚರ್ಚಿಸುವುದು ಈ ಬಳಗದ ಉದ್ದೇಶವಾಗಿತ್ತು. ಆಗ ಒಂದಷ್ಟು ಆಗತಾನೇ ಬರಹ ಆರಂಭಿಸಿದ್ದ ಕವಿ, ಕತೆಗಾರ, ಹೋರಾಟ, ತಮಟೆ ವಾದ್ಯ.. ಇತ್ಯಾದಿಯವರನ್ನು ಕರೆಸಿ ತಿಂಗಳ ಮೊದಲ ಮಂಗಳವಾರ ಸಂಜೆ ಐದಕ್ಕೆ ಪೃಥ್ವಿ ಮಲ್ಲಣ್ಣ ಅವರ ಓಶೋ ಧ್ಯಾನ ಕೇಂದ್ರದಲ್ಲಿ ಈ ಚರ್ಚೆಯನ್ನು ಮಾಡುತ್ತಿದ್ದೆವು.. ಚಿಂತನೆಯಲ್ಲಿ ಭಾಗವಹಿಸಿದ್ದವರು ಈಗ ಹೆಸರಾದವರು ಆಗಿದ್ದಾರೆ.
ಆಗ ವಿಜಯಮೋಹನ್ ಅವರ “ತಬ್ಬಲಿಸಾರು” ಎನ್ನುವ ಹೊಸ ಕಥಾಸಂಕಲನವನ್ನು ಚರ್ಚೆಗೆ ಆಯ್ದುಕೊಂಡಿದ್ದೆವು. ಅದರ ಭಾಷೆ, ಅಭಿವ್ಯಕ್ತಿಯ ಬಗ್ಗೆ ಒಂದೂವರೆ ಗಂಟೆ ಚರ್ಚಿಸಿದೆವು. ಅದಾದ ಮೇಲೆ ಮೇಡಂ ಸಿಗುವುದು ಅಪರೂಪವಾಯಿತು. ಅವರು ಮಧುಗಿರಿ. ತುಮಕೂರಿಗೆ ಬಂದು ಹೋಗುವುದು ಕಷ್ಟವೇ. ಅವರ ಅಂಗಹೀನತೆಯೂ ಕಾರಣವಾಗಿತ್ತೆನಿಸುತ್ತದೆ.
ಕಳೆದ ತಿಂಗಳು ದಸರ ಕವಿಗೋಷ್ಠಿಯಲ್ಲಿ ಭಾಗವಹಿಸಿದಾಗ “ನನ್ನ ಕಾದಂಬರಿ ಕಳಿಸುವೆ ಮುನ್ನುಡಿ ಬರೆದುಕೊಡಿ” ಎಂದು ಹತ್ತು ದಿನದ ಹಿಂದೆ ಕಳಿಸಿದ್ದರು.
“ಯಕನೀರು” ಕಾದಂಬರಿ ಮಧುಗಿರಿ ಸೊಗಡಿನಲ್ಲಿ ಕಟ್ಟಿದ ಕಾದಂಬರಿ. ಹತ್ತು ವರ್ಷಗಳ ಹಿಂದೆ ತರಂಗ ಪತ್ರಿಕೆಯಲ್ಲಿ ಮೊದಲ ಬಹುಮಾನ ಪಡೆದ ಕಾದಂಬರಿಯಾಗಿತ್ತಂತೆ. ಆದರೆ ಕೃತಿಯಾಗಿ ಪ್ರಕಟವಾಗಿರಲಿಲ್ಲ..
“ಯಾರು ಹೇಳಲಿಲ್ಲ ರವಿ. ರಮಾಕುಮಾರಿ ಮೇಡಂ ಗುರುತಿಸಿ ಹೇಳಿದ್ದಕ್ಕೆ ಪ್ರಕಟಿಸುತ್ತಿರುವೆ. ನಿಮ್ಮ ಮಾತು ಬರೆದುಕೊಡಿ” ಎಂದಿದ್ದರು.
ದಮನಿತ ಸಮುದಾಯದ ಅಂಗನವಾಡಿ ಸಹಾಯಕರು, ನರ್ಸ್ ಗಳು ಹಳ್ಳಿಯ ಬದುಕಿನಲ್ಲಿ ಎದುರಿಸುವ ಆತಂಕ, ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರ , ಅದರಿಂದ ಹೆಣ್ಣು ಮಕ್ಕಳು ಬದುಕು ಕಳೆದುಕೊಳ್ಳುವುದು, ಪುಟಿದೇಳುವ ಧೈರ್ಯ ತೋರುವುದು, ಅಸಹಾಯಕರಾಗಿ ದುಃಖಿಸುವುದು… ಇತ್ಯಾದಿಗಳು ಈ ಕಾದಂಬರಿಯಲ್ಲಿ ಜೀವ ತಳೆದಿವೆ. ಯಾವ ಥಿಯರಿಗಳಿಲ್ಲದೆ ತಮ್ಮ ಪಾಡಿಗೆ ಬದುಕನ್ನು ನೋಡುವ ಗುಣ ಅವರಿಗೆ ದಕ್ಕಿತ್ತು.. ಅದೇ “ಯಕನೀರು” ಕಾದಂಬರಿ ರೂಪುಗೊಳ್ಳಲು ಕಾರಣ… ತುಮಕೂರು ಭಾಷೆಯ ಮತ್ತೊಂದು ಬನಿ ಈ ಕಾದಂಬರಿಯಲ್ಲಿದೆ.
“ನಾನು ಕಂಡ ಬದುಕನ್ನೇ ನೇರವಾಗಿ ಬರಹಕ್ಕಿಳಿಸಿದ್ದೇನೆ.. ನೀವು ಆರಂಭದಲ್ಲಿ ನನಗೆ ಅವಕಾಶ ಕೊಟ್ಟಿರಿ. ಅದಕ್ಕೆ ನೀವು ಬರೆಯಲೇಬೇಕು ” ಎಂದು ಒತ್ತಾಯಿಸಿದ್ದರು.
ಮೊನ್ನೆಯಷ್ಟೇ ಮಾತಾಡಿದವರು, ನನ್ನ ಇಲಾಖೆ ಸಾಕಷ್ಟು ದಣಿಸಿದೆ ಎಂದೆಲ್ಲಾ ಸಾಕಷ್ಟು ಮಾತನಾಡಿದರು. ಹಳ್ಳಿಯಲ್ಲಿ ಶಾಲಾಮೇಡಂ ಆಗಿ ಕತೆಗಳನ್ನು ತನ್ನ ಭಾಷೆಯಲ್ಲಿಯೇ ಕಟ್ಟಬೇಕೆಂಬ ಹಂಬಲ ತೋರಿದ್ದು.. ..ತುಮಕೂರಿನ ಭಾಷೆಯನ್ನು ವಿಭಿನ್ನವಾಗಿ ಕಟ್ಟುತ್ತಿದ್ದವರು ಈಗ ಇಲ್ಲವೆಂದರೆ…


