ಸಂಕಟ ಇಡೀ ಕವಿತೆಗಳಲ್ಲಿ ಹರಡಿಕೊಂಡಿರುವುದು ನಮಗೆ ಎದ್ದು ಕಾಣುತ್ತದೆ. ಸಂಕಟವಿಲ್ಲದೆ ಏಕಾಂತವಿಲ್ಲ. ಸಂಕಟವೆಂದರೆ ಅದು ಗೋಳಲ್ಲ. ಸಂಕಟವಿಲ್ಲದೆ ವಿಕಾಸವಿಲ್ಲ. ಒಂದು ಸಮಾಜ ವಿಕಾಸವಾಗುವಾಗ, ಸಮುದಾಯ ವಿಕಾಸವಾಗುವಾಗ, ಇಡೀ ಪ್ರಕೃತಿಯಲ್ಲಿ ಜೀವ ವಿಕಾಸವಾಗುವಾಗ ಸಂಕಟವಿರುತ್ತದೆ. ಸೇರಿಸಿಕೊಳ್ಳುವುದು, ಒಡೆಯುವುದು, ರೆಕ್ಕೆ ಮೂಡುವಾಗ ಆಗುವ ಸಂಕಟ, ಸ್ಥಾಪಿತವಾದ ನಿರ್ಧಿಷ್ಟ ಮಾದರಿ ಒಡೆಯುವಾಗ ಆಗುವ ಸಂಕಟ, ಈ ಎಲ್ಲಾ ಸಂಕಟ ವಿಕಾಸಕ್ಕೂ ಕಾರಣವಾಗುತ್ತದೆ. ಸಂಕಟ ಇಲ್ಲದೆ ವಿಕಾಸವಿಲ್ಲ. ಹಾಗಾಗಿ ರಮಾಕುಮಾರಿ ಅವರ ಎಲ್ಲಾ ಕವಿತೆಗಳಲ್ಲಿ ಮೌನ ಅಳು, ಸಂಕಟದ ಧ್ವನಿ ಕಂಡುಬರುತ್ತದೆ ಎಂದು ತುಮಕೂರು ವಿವಿ ಪ್ರಾಧ್ಯಾಪಕಿ ಗೀತಾ ವಸಂತ್ ಅಭಿಪ್ರಾಯಪಟ್ಟರು.
ತುಮಕೂರು ನಗರದ ಕನ್ನಡ ಭವನದಲ್ಲಿ ದಾರಿ ಬುತ್ತಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಲೇಖಕಿ ಬಾ.ಹ.ರಮಾಕುಮಾರಿ ಅವರ ‘ಏಕದಾರಿ ಮತ್ತು ಇತರ ಕವಿತೆಗಳು’ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಕೃತಿಯ ಕುರಿತು ಅವರು ಮಾತನಾಡಿದರು.
ಹಾಗಂತ ಅವರು ಸಂಕಟದ ದನಿಯಲ್ಲಿ ಅವರು ಕರಗಿ ಹೋಗಿಲ್ಲ. ಅದರಿಂದ ಹೊರಗೆ ಬಂದು ಮಾತನಾಡುತ್ತಾರೆ. ಕ್ರೌಂಚ ಪಕ್ಷಿಯಂಥ ಒಂಟಿ ದನಿಯಂತಹ ಒಂದು ದನಿ ಇಡೀ ಕವನ ಸಂಕಲನದಲ್ಲಿ ನಿನದಿಸಿದೆ. ಅನೇಕ ಪಕ್ಷಿಯ ಪ್ರಜ್ಞೆ ಇರುವ ಕವಿತೆಗಳು ಇವೆ. ಕವನ ಸಂಕಲನದ ಈ ಸಂಕಟ ಎಲ್ಲರ ಸಂಕಟವಾಗಿಯೂ ಬರುತ್ತದೆ. ಇದು ಸಮೂಹದ ಸಂಕಟವೂ ಹೌದು, ಯಾರ ಸಂಕಟವೂ ಪ್ರತ್ಯೇಕವಾಗಿ ಇರುವುದಿಲ್ಲ ಎಂದು ಹೇಳಿದರು.
ಕಾವ್ಯ ಸಮೂಹ ಧ್ವನಿಯೋ, ಏಕಾಂತದ ಧ್ವನಿಯೋ ಎನ್ನುವ ಪ್ರಶ್ನೆಯನ್ನು ನಾವು ಹಾಕಿಕೊಳ್ಳುತ್ತೇವೆ. ಎಷ್ಟೊ ಸಲ ಕವಿ ಎಂದರೆ ಈ ಸಮೂಹದ ಧ್ವನಿಗಳಿಗೆ ಆಕಾರ ಕೊಡುವವನು. ಸಮೂಹ ಧ್ವನಿ ಅಭಿವ್ಯಕ್ತಿಗೊಳಿಸಲು ಕಾಯುತ್ತಿರುತ್ತದೆ. ಸಮೂಹದ ಆಶೋತ್ತರಗಳಿಗೆ ದನಿ ಕೊಡುವವನು ಕವಿಯೇ ಆಗಿರುತ್ತಾನೆ ಎಂದರು.
ಒಂದು ಸಮುದ್ರ ಅಂದರೆ ಅದು ನಿತ್ಯವೂ ಹೊಸದು. ಇಂದು ಇದ್ದ ಸಮುದ್ರ ನಾಳೆ ಬದಲಾಗಿರುತ್ತದೆ. ಕಾರಣ ಸಮುದ್ರಕ್ಕೆ ಹೊಸ ನದಿಗಳು ಬಂದು ಸೇರಿಕೊಳ್ಳುತ್ತವೆ. ಹೊಸ ನೀರು ಬರುತ್ತದೆ. ನಾವು ನಿತ್ಯವೂ ನಡೆಯುವ ದಾರಿ ಹೊಸದೇ ಆಗಿರುತ್ತದೆ. ಇಂದಿನ ವಿಸ್ಮಯ ನಾಳೆ ಇರುವುದಿಲ್ಲ. ಅದು ಸದಾ ಬದಲಾಗುತ್ತಿರುತ್ತದೆ. ಕಾವ್ಯದ ದಾರಿ ನಿತ್ಯವೂ ಹೊಸದಾಗಿರುತ್ತದೆ. ಈ ನಿಟ್ಟಿನಲ್ಲಿ ರಮಾಕುಮಾರಿ ಅವರ ಕಾವ್ಯವನ್ನು ನೋಡಬಹುದು ಎಂದು ತಿಳಿಸಿದರು.

ರಮಾಕುಮಾರಿ ಅವರು ನಿರಂತರವಾಗಿ ದೀರ್ಘ ಕಾಲದವರೆಗೆ ಬರೆಯುತ್ತಾ ಬಂದಿದ್ದಾರೆ. ಈಗ ಬರೆಯುತ್ತಿರುವುದರಲ್ಲಿ ಸ್ಟೀರಿಯೋ ಟೈಪ್ ಗಳನ್ನು ಒಡೆಯುತ್ತಿರುವುದು ಕಂಡು ಬರುತ್ತದೆ. ರಮಾಕುಮಾರಿಯ ಅವರ ಕಾವ್ಯ ಏಕದಾರಿಯ ಹಾಗೆ ಒಂಟಿ ಆಲಾಪ ಇರುವ ಹಾಗೆ ಸಮಾಜದ ಬಗ್ಗೆ ದಿಕ್ಕನೆದ್ದು ಪ್ರಶ್ನಿಸುವ ರೀತಿಯು ಇವರ ಕವಿತೆಗಳಲ್ಲಿ ಇದೆ. ಇಲ್ಲಿರುವ ಆತ್ಮಶೋಧ ನಮ್ಮೆಲ್ಲರ ಆತ್ಮಶೋಧವೂ ಕೂಡ ಹೌದು. ಎಲ್ಲಾ ಹೋರಾಟಗಳ ನಂತರ, ಎಲ್ಲಾ ಸಿದ್ದಾಂತಗಳ ನಂತರ ಕೊನೆಗೂ ನಮ್ಮ ಅಂತರಂಗದಲ್ಲಿ ನಮ್ಮನ್ನು ನಾವು ಪ್ರಶ್ನೆ ಮಾಡಿಕೊಂಡಾಗ ನಮಗೆ ಅರ್ಥ ಮಾಡಿಕೊಂಡಿದ್ದೇವೆಯೇ? ಇದು ಕವಿತೆಯಲ್ಲಿ ವ್ಯಕ್ತವಾಗಿದೆ ಎಂದು ಹೇಳಿದರು.
ಕವಿತೆ ಅಂತರಂಗದ ಮರ್ಮರಗಳನ್ನು ನಮಗೆ ಗೊತ್ತಿಲ್ಲದೆ ನಮ್ಮನ್ನು ತೋರಿಸುತ್ತದೆ. ಅಂತಹ ಕವಿತೆಗಳನ್ನು ರಮಾಕುಮಾರಿ ಅವರು ಬರೆದಿದ್ದಾರೆ. ಕೃತಿಯಲ್ಲಿ ಒಳಿತು ಇದೆ. ಪ್ರೀತಿ ಇದೆ, ಮೈತ್ರಿ ಇದೆ. ಸಂಬಂಧ ಇದೆ. ಕತ್ತಲು ಬೆಳಕಿನ ಜಿಜ್ಞಾಸೆಯನ್ನು ನೋಡಿದರೆ, ಅಲ್ಲಮ ಹೇಳಿದಂತೆ ಕತ್ತಲೂ ಅದೇ, ಬೆಳಕೂ ಅದೇ ಆಗಿದೆ. ಮೌನದಿಂದ ಮಾತು, ಆಲೋಚನೆ, ಕೊನೆಗೆ ಕತ್ತಲೆಯಿಂದ ಬೆಳಕು ಆಗುತ್ತದೆ. ಮೌನ ಇಲ್ಲಿನ ಕವಿತೆಗಳಲ್ಲಿ ಹರಡಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು, ಲೇಖಕಿ ಬಾ.ಹ.ರಮಾಕುಮಾರಿ ಇದ್ದರು.


