ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ನೀಡಿರುವ ಹೇಳಿಕೆ ರಾಜ್ಯ ಕಾಂಗ್ರೆಸ್ಸಿನಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ.
ತಮ್ಮ ಹೇಳಿಕೆಯ ಬಗ್ಗೆ ದೊಡ್ಡ ಮಟ್ಟದಲ್ಲಿ ಪರ- ವಿರೋಧದ ಚರ್ಚೆಯಾಗುತ್ತಿರುವುದನ್ನು ಗಮನಿಸಿದ ಯತೀಂದ್ರ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ತಾವು ಸತೀಶ್ ಜಾರಕಿಹೊಳಿ ಅವರನ್ನು ಸೈದ್ಧಾಂತಿಕವಾಗಿ ತಮ್ಮ ತಂದೆಯ ಉತ್ತರಾಧಿಕಾರಿ ಎಂದು ಹೇಳಿದ್ದೇನೆಯೇ ಹೊರತು ಮುಖ್ಯಮಂತ್ರಿಯಾಗಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತಮ್ಮ ತಂದೆ ಮುಖ್ಯಮಂತ್ರಿಯಾಗಿ 5 ವರ್ಷಗಳ ಕಾಲ ಅಧಿಕಾರ ಅವಧಿ ಪೂರ್ಣಗೊಳಿಸುತ್ತಾರೆ ಇವರ ನಂತರ ಯಾರಾಗಬೇಕು ಎಂದು ಹೈಕಮಾಂಡ್ ಮತ್ತು ಶಾಸಕರು ತೀರ್ಮಾನಿಸುತ್ತಾರೆ. ಆದರೆ ತತ್ವ ಮತ್ತು ಸೈದ್ಧಾಂತಿಕವಾಗಿ ಅಹಿಂದ ಪರವಾದ ನಿಲುವು ಹೊಂದಿರುವ ಸತೀಶ್ ಜಾರಕಿಹೊಳಿಯವರು ಸೈದ್ಧಾಂತಿಕವಾಗಿ ತಮ್ಮ ತಂದೆಯವರ ಉತ್ತರಾಧಿಕಾರಿ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ. ಜಿ ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಸತೀಶ್ ಜಾರಕಿಹೊಳಿ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರು ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದರು.
ನಾಯಕತ್ವ ಬದಲಾವಣೆ ವಿಚಾರವಾಗಿ ಯಾರೂ ಮಾತನಾಡಬಾರದು ಎಂದು ಹೈಕಮಾಂಡ್ ತಿಳಿಸಿದೆ. ಇದಾದ ನಂತರ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ನೂರು ಬಾರಿ ಸ್ಪಷ್ಟನೆಯನ್ನು ಈ ಕುರಿತಾಗಿ ಎಲ್ಲರೂ ಕೊಟ್ಟಿದ್ದಾರೆ. ಆದರೂ ಪದೇ ಪದೇ ಈ ವಿಚಾರ ಯಾಕೆ ಪ್ರಸ್ತಾಪವಾಗುತ್ತಿದೆ ಎಂದು ಕೇಳಿದರು.
ಯಾವುದಾದರೂ ರೇಸ್ ಇರಲಿ ತೀರ್ಮಾನ ಮಾಡುವುದು ಹೈಕಮಾಂಡ್. ಆ ಸಂದರ್ಭ ಬಂದಾಗ ಸಿಎಲ್‌ಪಿ ಸಭೆಯನ್ನು ಕರೆಯಲಾಗುತ್ತದೆ. ಎಂಎಲ್‌ಎಗಳ ಅಭಿಪ್ರಾಯ ತೆಗೆದುಕೊಳ್ಳುತ್ತಾರೆ. ಹೈಕಮಾಂಡ್‌ನಿಂದ ಬರುವ ವೀಕ್ಷಕರು ಹೈಕಮಾಂಡ್ ಗೆ ಮಾಹಿತಿ ಕೊಡ್ತಾರೆ. ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಆ ಸಂದರ್ಭದಲ್ಲಿ ಘೋಷಣೆ ಮಾಡುತ್ತಾರೆ ಎಂದರು.
ಸತೀಶ್ ಜಾರಕಿಹೊಳಿ ಮುಂದಿನ ನಾಯಕತ್ವ ವಹಿಸಿಕೊಳ್ಳಲಿ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಮಾತನಾಡಿ, “ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯನವರು ಉತ್ತರಾಧಿಕಾರಿಯ ಅಂತ ಹೇಳಿದ್ದಾರಾ? ಅವರು ಸೈದ್ಧಾಂತಿಕವಾಗಿ ಯಾವ ರೀತಿಯಲ್ಲಿ ಇದ್ದಾರೆ ಎಂದು ಹೇಳಿದ್ದಾರೆ. ಸೈದ್ಧಾಂತಿಕವಾಗಿ ಸಿದ್ದರಾಮಯ್ಯ ಅವರ ದಾರಿಯಲ್ಲೇ ಹೋಗ್ತಾರೆ ಸತೀಶ್ ಅಂತ ಹೇಳಿದ್ದಾರೆ. ಅಹಿಂದ ಪ್ರಾರಂಭ ಆದಾಗ ಸತೀಶ್ ಜಾರಕಿಹೊಳಿ ಬಹಳ ಮುಖ್ಯ ಪಾತ್ರ ವಹಿಸಿದ್ದರು. ಆ ಹಿನ್ನೆಲೆಯಲ್ಲಿ ಅವರು ಹೇಳಿದ್ದಾರೆ ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಈ ಕುರಿತಾಗಿ ಮಾತನಾಡಿರುವ ಬೃಹತ್ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ವಿಧಾನಪರಿಷ ಸದಸ್ಯ
ಯತೀಂದ್ರ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಎಂಬುವುದನ್ನು ಗಮನಿಸಬೇಕು. 2028 ರಲ್ಲೂ ಸಿದ್ದರಾಮಯ್ಯ ನಾಯಕತ್ವ ಬೇಕಾಗುತ್ತದೆ. ಅವರನ್ನ ಬಿಟ್ಟು ಚುನಾವಣೆ ಮಾಡಲು ಸಾಧ್ಯವಿಲ್ಲ. ಸ್ವಾಭಾವಿಕವಾಗಿ ಇದನ್ನು ಹೇಳಿದ್ದಾರೆ ಎಂದರು.
ಸತೀಶ್ ಜಾರಕಿಹೊಳಿ ಅವರು ಕೂಡ ಒಳ್ಳೆಯ ನಾಯಕರು.ಅವರಿಗೆ ಕೂಡ ಸಿಎಂ ಆಗುವ ಎಲ್ಲ ಅರ್ಹತೆಗಳು ಇವೆ. ಆದರೆ ಸದ್ಯಕ್ಕೆ ಸಿಎಂ ಸ್ಥಾನ ಖಾಲಿ ಇಲ್ಲ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಎಂಬಿ ಪಾಟೀಲ್, ಸತೀಶ್ ಜಾರಕಿಹೊಳಿ ಯಾರದ್ದೂ ನಡೆಯಲ್ಲ. ಈ ವಿಚಾರವಾಗಿ ನಮ್ಮ ಹೈಕಮಾಂಡ್ ಎಲ್ಲವನ್ನೂ ನಿರ್ಧಾರ ಮಾಡುತ್ತದೆ ಎಂದು ಸ್ಪಷ್ಟಪಡಿಸಿದರು.
ಸತೀಶ್ ಜಾರಕಿಹೊಳಿ ಹಿಂದುಳಿದ ವರ್ಗದ ಪರ ಧ್ವನಿ ಎತ್ತಿರುವವರು. ಅವರು ಸಂಘಟನೆ ಚತುರರು. 2028 ಕ್ಕೆ ಅವರು ಸಿಎಂ ಆಕಾಂಕ್ಷಿ ಅಂದರೆ ತಪ್ಪೇನು. ಎಲ್ಲಾ ಶಾಸಕರು ಕೂಡ ಅರ್ಹತೆ ಇರುವವರು. ಎಲ್ಲವನ್ನೂ ಹೈ ಕಮಾಂಡ್ ತೀರ್ಮಾನ ಮಾಡುತ್ತದೆ. ಬಿಜೆಪಿಯ ಕೆಲವು ಯೋಚನೆಗಳು ಯೋಚನೆಯಾಗಿಯೇ ಉಳಿಯುತ್ತವೆ. ನಮ್ಮಲ್ಲಿ ಏನೇ ಆದರೂ ಬಿಜೆಪಿ ಕೈಯಲ್ಲಿ ಇಲ್ಲ, ಹೈ ಕಮಾಂಡ್ ನಾಯಕರು ಇದ್ದಾರೆ ಎಂದರು.


