ಕರ್ನಾಟಕದ ಉಚ್ಛನ್ಯಾಯಾಲಯದ ಮುಖ್ಯನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಿದರು.
1987ರಲ್ಲಿ ಬೆಂಗಳೂರಿನಲ್ಲಿ ನೋಂದಣಿ ಮಾಡಿಸಿದ ಬಿ.ವಿ.ನಾಗರತ್ನ ಅವರು ವಕೀಲ ವೃತ್ತಿ ಆರಂಭಿಸಿದರು. ಸಂವಿಧಾನಿಕ ಕಾನೂನು, ವಾಣಿಜ್ಯ ಕಾನೂನು, ವಿಮಾ ಕಾನೂನು, ಸೇವಾ, ಆಡಳಿತ, ಸಾರ್ವಜನಿಕ ಮತ್ತು ಕೌಟುಂಬಿಕ ಕಾನೂನುಗಳನ್ನು ಆಳವಾಗಿ ಅಭ್ಯಾಸ ಮಾಡಿದರು.
2008ರಲ್ಲಿ ಬಿ.ವಿ.ನಾಗರತ್ನ ಅವರ ಸೇವೆಯನ್ನು ಪರಿಗಣಿಸಿ ಹೈಕೋರ್ಟ್ ನಲ್ಲಿ ಅಧಿಕ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಯಿತು. 2010ರಿಂದ ಅವರು ಖಾಯಂ ನ್ಯಾಯಮೂರ್ತಿಗಳಾಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ.
ಇಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ಬಿ.ವಿ.ನಾಗರತ್ನ ಅವರು 2027ರಲ್ಲಿ ಭಾರತದ ಸರ್ವೋಚ್ಛನ್ಯಾಯಾಲಯದ ಮೊದಲ ಮಹಿಳಾ ಮುಖ್ಯನ್ಯಾಯಮೂರ್ತಿಯಾಗಲಿದ್ದಾರೆ.
ಅಭಯ್ ಶ್ರೀನಿವಾಸ್ ಓಕಾ 1983ರಲ್ಲಿ ವಕೀಲರಾಗಿ ನೋಂದಣಿ ಮಾಡಿಸಿ 19 ವರ್ಷಗಳ ಕಾಲ ಬಾಂಬೆ ಹೈಕೋರ್ಟ್ ನಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದರು. 2003ರಲ್ಲಿ ಹೈಕೋರ್ಟ್ ನಲ್ಲಿ ನ್ಯಾಯಾಧೀಶರಾಗಿ ಆಯ್ಕೆಯಾದರು. 2005ರಲ್ಲಿ ಖಾಯಂ ನ್ಯಾಯಾಧೀಶರಾಗಿ ಕೆಲಸ ನಿರ್ವಹಿಸಿದರು.
ಏಪ್ರಿಲ್ 30, 2019ರಂದು ಕರ್ನಾಟಕ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿ ನೇಮಕವಾದರು. ಮೇ. 10, 2019ರಂದು ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದರು.ಈಗ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.