ಟೋಕಿಯೋದ ಪ್ಯಾರಾಲಂಪಿಕ್ ಕ್ರೀಡಾಕೂಟದಲ್ಲಿ ಇಂದು ನಡೆದ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗಳಿಸಿರುವ ಅಥ್ಲೆಟ್ ಸುಮಿತ್ ಆಂಟಿಲ್ ವಿಶ್ವ ದಾಖಲೆ ಮಾಡಿದ್ದಾರೆ. ಎಫ್-64 ವಿಭಾಗದಲ್ಲಿದ್ದ ದಾಖಲೆ ಮುರಿದು ಹೊಸ ದಾಖಲೆ ಬರೆದಿದ್ದಾರೆ ಸುಮಿತ್.
ಸುಮಿತ್ ಅಂಟಿಲ್ ಮೊದಲ ಪ್ರಯತ್ನದಲ್ಲಿ 66.95 ಮೀಟರ್ ದೂರ ಎಸೆದರು. 2ನೇ ಪ್ರಯತ್ನದಲ್ಲಿ 68.08 ಮೀಟರ್ ಎಸೆದು ಮುನ್ನಡೆದರು. ಮೂರು ಮತ್ತು ನಾಲ್ಕನೇ ಸುತ್ತಿನಲ್ಲಿ 65.27 ಮತ್ತು 66.71 ಮೀಟರ್ ಎಸೆದರು. 5ನೇ ಪ್ರಯತ್ನದಲ್ಲಿ 68.55 ಮೀಟರ್ ದೂರ ಎಸೆಯುವ ಮೂಲಕ ನೂತನ ವಿಶ್ವದಾಖಲೆ ಮಾಡಿದರು.
ಎಫ್-64 ವಿಭಾಗದಲ್ಲಿ ಜಾವೆಲಿನ್ ಥ್ರೋದಲ್ಲಿ ಆಸ್ಟ್ರೇಲಿಯಾದ ಬೈಕಲ್ ಬುದಿನ್ 66.29 ಮೀಟರ್ ಎಸೆದು ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕವನ್ನು ಗೆದ್ದರು. ಶ್ರೀಲಂಕಾದ ದುಲಾನ್ ಕೊಡಿತುವಕ್ಕು ಮೂರನೇ ಸ್ಥಾನ ಪಡೆದು ಕಂಚಿನ ಪದಕ ಗಳಿಸಿದರು.
ಪ್ಯಾರಾಲಂಪಿಕ್ ಕ್ರೀಡಾಕೂಟದಲ್ಲಿ ಇಂದು ಒಂದೇ ದಿನ ಭಾರತಕ್ಕೆ ಎರಡು ಚಿನ್ನದ ಪದಕಗಳು ಲಭಿಸಿವೆ. ಇದರ ಜೊತೆಗೆ ದೇವೇಂದ್ರ ಜರೂಹಿಯಾ ಮತ್ತು ಸುಂದರ್ ಸಿಂಗ್ ಕೂಡ ಬೆಳ್ಳಿ ಪದಕ ಪಡೆದು ಸಾಧನೆ ಮಾಡಿದ್ದಾರೆ. ಇವರೆಲ್ಲರ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.