ರಾಜ್ಯದಲ್ಲಿ ಸಾರ್ವಜನಿಕರು ಗಣೇಶ ಹಬ್ಬವನ್ನು ಆಚರಿಸಲು ಅನುಮತಿ ನೀಡುವ ಬಗ್ಗೆ ರಾಜ್ಯ ಸರ್ಕಾರ ಸಧ್ಯಕ್ಕೆ ಸ್ಪಷ್ಟ ತೀರ್ಮಾನ ಪ್ರಕಟಿಸಿಲ್ಲ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಗಣೇಶ ಹಬ್ಬದ ಆಚರಿಸುವ ಬಗ್ಗೆ ನೆಗೆಟೀವ್ ಯೋಚನೆ ಇದೆ. ಬಿಜೆಪಿ ಪಾಸಿಟೀವ್ ಆಗಿ ಯೋಚಿಸುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಕಾಂಗ್ರೆಸ್ ಪಕ್ಷವನ್ನು ಕೆಣಕಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅರ್. ಅಶೋಕ್ ” ಸಭೆಯಲ್ಲಿ ನಾನು ಗಣೇಶ್ ಹಬ್ಬ ಆಚರಣೆ ಪರ ಬ್ಯಾಟಿಂಗ್ ಮಾಡಿದ್ದೇನೆ. ಬಿಜೆಪಿಯೂ ಗಣೇಶ ಹಬ್ಬದ ಆಚರಣೆಯ ಪರವಾಗಿದೆ. ಆದರೆ ಮೂರನೇ ಅಲೆ ಬರುವ ನಿರೀಕ್ಷೆಯಲ್ಲಿ ಗಣೇಶ ಹಬ್ಬ ಆಚರಿಸುವ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸಬೇಕಾಗಿದೆ” ಎಂದು ತಿಳಿಸಿದರು.
ಬೆಂಗಳೂರು, ಚಿತ್ರದುರ್ಗ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಅಲ್ಲಿ 2 ಲಕ್ಷದವರೆಗೆ ಜನರು ಸೇರುತ್ತಾರೆ. ರಾಜ್ಯದ 30 ಕಡೆಗಳಲ್ಲಿ 60 ಸಾವಿರಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಹೀಗಾಗಿ ದೊಡ್ಡದಾಗಿ ಗಣೇಶ ಉತ್ಸವ ಮಾಡುವವರನ್ನು ಕರೆಸಿ ಅವರೊಂದಿಗೆ ಮಾತುಕತೆ ನಡೆಸುತ್ತೇವೆ. ಆನಂತರ ಅನುಮತಿ ನೀಡುವ ಬಗ್ಗೆ ಪ್ರಕಟಿಸುತ್ತೇವೆ ಎಂದರು.
ಸೆಪ್ಟಂಬರ್ 5ರಂದು ಗಣೇಶ ಹಬ್ಬ ಆಚರಿಸುವವರಿಗೆ ಶುಭ ಸುದ್ದಿ ದೊರೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂದು ಗಣೇಶೋತ್ಸವಕ್ಕೆ ಅನುಮತಿ ನೀಡುವ ಬಗ್ಗೆ ಘೋಷಣೆ ಮಾಡುತ್ತಾರೆ. ಭಕ್ತರಿಂದ ಗಣೇಶ ಹಬ್ಬ ಆಚರಿಸುವ ಬಗ್ಗೆ ಒತ್ತಡ ಬರುತ್ತಿದೆ. ಹಾಗಾಗಿ ಕೊವಿಡ್ ನಿಯಮಗಳನ್ನು ಅನುಸರಿಸಿ ಆಚರಣೆಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂದರು.
ನಿರ್ಬಂಧ ಸಡಿಲಿಕೆ:
ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಕಡೆ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳು ಕೇರಳಕ್ಕೆ ಹೊಂದಿಕೊಂಡಿವೆ. ಕೇರಳದಲ್ಲಿ ಪಾಸಿಟಿವಿಟಿ ದರ 19ಕ್ಕೆ ಏರಿದೆ. ದಿನಕ್ಕೆ 16 ಸಾವಿರ ಕೊವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಆದ್ದರಿಂದ ಕೇರಳದಿಂದ ರಾಜ್ಯಕ್ಕೆ ಬರುವ ಪ್ರತಿಯೊಬ್ಬರಿಗೂ 7 ದಿನ ಕ್ವಾರಂಟೈನ್ ಕಡ್ಡಾಯ. 8ನೇ ದಿನ ಅವರು ಆರ್.ಟಿ.ಪಿ.ಸಿ.ಆರ್. ಟೆಸ್ಟ್ ಮಾಡಿಸಬೇಕು ಎಂದರು.
ಕೋಲಾರ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ದಾವಣಗೆರೆ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಕಡಿಮೆ ಕಂಡು ಬಂದಿರುವುದರಿಂದ ಕೊವಿಡ್ ನಿಯಮಗಳಲ್ಲಿ ಸಡಿಲಿಕೆ ಮಾಡಲಾಗಿದೆ ಎಂದು ಅಶೋಕ್ ಸ್ಪಷ್ಟಪಡಿಸಿದರು.