Thursday, January 29, 2026
Google search engine
Homeಮುಖಪುಟಆರ್‌ಎಸ್‌ಎಸ್ ಚಟುವಟಿಕೆ ನಿರ್ಬಂಧಕ್ಕೆ ಪತ್ರ:ಪ್ರಿಯಾಂಕ್ ಖರ್ಗೆಗೆ ಭದ್ರತೆ

ಆರ್‌ಎಸ್‌ಎಸ್ ಚಟುವಟಿಕೆ ನಿರ್ಬಂಧಕ್ಕೆ ಪತ್ರ:ಪ್ರಿಯಾಂಕ್ ಖರ್ಗೆಗೆ ಭದ್ರತೆ

ರಾಜ್ಯದಲ್ಲಿ ಆರ್‌ಆರ್‌ಎಸ್ ಚಟುವಟಿಕೆ ನಿಷೇಧಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆಯೊಡ್ಡುವ ಪೋಸ್ಟ್ ಮಾಡಿದ್ದ ವ್ಯಕ್ತಿಯನ್ನು ಮಹಾರಾಷ್ಟದಲ್ಲಿ ಬಂಧಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.

ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಪ್ರಿಯಾಂಕ್ ಖರ್ಗೆಯವರಿಗೆ ಎಲ್ಲ ರೀತಿಯ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಇದರ ಹಿಂದೆ ಯಾರಾದರೂ ಇದ್ದಾರ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದರು.

ಸರ್ಕಾರಿ ಜಾಗಗಳಲ್ಲಿ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಖಾಸಗಿಯವರು ಕಾರ್ಯಕ್ರಮ ಮಾಡಬೇಕಾದರೆ ಅನುಮತಿ ಕಡ್ಡಾಯ. ಈ ಹಿಂದೆ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಖಾಸಗಿಯವರು ಸರ್ಕಾರಿ ಜಾಗದಲ್ಲಿ ಕಾರ್ಯಕ್ರಮ ಮಾಡುವುದನ್ನು ನಿಷೇಧ ಮಾಡಿ ಅಥವಾ ಅನುಮತಿ ಪಡೆಯುವಂತೆ ಆದೇಶ ಮಾಡಿದ್ದರು. ಆದರೆ ಇತ್ತೀಚೆಗೆ ಕೆಲವು ಸಂಘಟನೆಗಳು ಇದನ್ನು ದುರುಪಯೋಗ ಮಾಡಿಕೊಳ್ಳುತ್ತಿವೆ ಎಂದು ಹೇಳಿದರು.

ಶಾಲಾ-ಕಾಲೇಜು ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಸೇರಿ ಬೇರೆ ಬೇರೆ ಖಾಸಗಿ ಸಂಸ್ಥೆಗಳಿಗೆ ಕಾರ್ಯಕ್ರಮ ಮಾಡಲು ಅವಕಾಶ ಕೊಡಬಾರದು ಎಂದು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಆರ್‌ಎಸ್‌ಎಸ್‌ನವರು ಪಥಸಂಚಲನ ನಡೆಸುವ ಸಂಬಂಧ ಪೊಲೀಸರ ಅನುಮತಿ ಪಡೆಯಬೇಕು. ಕಾನೂನು ಕ್ರಮಗಳನ್ನು ಪಾಲಿಸಿ ಪಥಸಂಚಲನ ನಡೆಸಬೇಕು ಎಂದು ಹೇಳಿದರು.

ಹಣ ಮಾಡುವುದಕ್ಕೋಸ್ಕರ ಭೂ ಪರಿವರ್ತನೆ ಮಾಡಲಾಗುತ್ತಿದೆ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ಪರಮೇಶ್ವರ್, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದವರು, ಈಗ ಕೇಂದ್ರ ಸಚಿವರಾಗಿದ್ದಾರೆ. ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಭೂ ಪರಿವರ್ತನೆ ವಿಚಾರದಲ್ಲಿ ಹಣ ಮಾಡಲಾಗುತ್ತಿದೆ ಎಂಬುದನ್ನು ಅವರು ನಿರ್ದಿಷ್ಟವಾಗಿ ಹೇಳಬೇಕು. ನಿರ್ದಿಷ್ಟವಾಗಿ ಹೇಳಿದರೆ ತನಿಖೆ ಮಾಡುತ್ತೇವೆ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular